ಮತಾಂತರಕ್ಕೆ ಯತ್ನ ಮೂವರ ಬಂಧನ

ಚಿಕ್ಕಮಗಳೂರು,ಏ.೧-ಜಿಲ್ಲೆಯ ಎರೇಹಳ್ಳಿ ಗ್ರಾಮದಲ್ಲಿ ಬರಗಾಲವನ್ನು ನೆಪವಾಗಿ ಮಾಡಿಕೊಂಡು ಜನರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದ ಮೂವರನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.
ಯೇಸು ನಿಮಗೆಲ್ಲಾ ಒಳ್ಳೆಯದು ಮಾಡುತ್ತಾನೆ. ಮಳೆ-ಬೆಳೆ ಆಗಲಿದೆ. ನಿಮ್ಮ ಕಷ್ಟವನ್ನು ಬಗೆಹರಿಸುತ್ತಾನೆ ಎಂದು ಹೇಳಿ ಮತಾಂತರ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಬಂದವರ ವಿರುದ್ದ ಹಿಂದೂಗಳು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಮೂವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮೂವರಲ್ಲಿ ಓರ್ವ ಅಪ್ರಾಪ್ತ ಹಿಂದೂ ಹೇಳಲಾಗಿದೆ. ರಾಜನ್ ಎಂಬಾತ ಇನ್ನಿಬ್ಬರೊಂದಿಗೆ ಇಂದಾವರ, ಉಂಡೇದಾಸರಹಳ್ಳಿ, ಎರೇಹಳ್ಳಿಯ ಮನೆಗಳಿಗೆ ತೆರಳಿ ಮತಾಂತರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಎರೇಹಳ್ಳಿ ನಿವಾಸಿ ಪ್ರಸನ್ನ ಕುಮಾರ್ ಎಂಬುವವರ ಮನೆಗೂ ಹೋಗಿದ್ದರು ನಿಮ್ಮ ದೇವರು ನಿಮ್ಮ ಕಷ್ಟಕ್ಕೆ ಸಹಾಯ ಮಾಡುತ್ತಿಲ್ಲ. ಮಳೆ ಬರಿಸುತ್ತಿಲ್ಲ. ನಿಮ್ಮ ಮನೆಗೆ ಏಸು ಬರುತ್ತಾನೆ. ನಿಮ್ಮ ಕಷ್ಟಗಳಿಗೆ ಪರಿಹಾರ ಒದಗಿಸುತ್ತಾನೆ ಎಂದಿದ್ದಾರೆ. ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯ ಮಾಡಿದ್ದಾರೆ. ಎರೇಹಳ್ಳಿಯ ಹಲವು ಮನೆಗಳಿಗೆ ಹೋಗಿ ಮತಾಂತರ ಮಾಡಲು ಮುಂದಾಗಿದ್ದರು.
ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಹೋಗಿ ಮೂವರನ್ನು ಬಂಧಿಸಿದ್ದಾರೆ.
ಮತಾಂತರ ಮಾಡಲು ಬಂದವರ ಮಾತುಗಳನ್ನ ಗಮನಿಸಿದ ಪ್ರಸನ್ನ ಆಕ್ರೋಶಗೊಂಡು ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಗ್ರಾಮಸ್ಥರು ಒಟ್ಟಾಗಿ ಮತಾಂತರ ಮಾಡುವ ಪ್ರಯತ್ನವನ್ನು ವಿರೋಧಿಸಿದ್ದಾರೆ. ಬಳಿಕ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.