
ಕೋಲಾರ,ಮಾ.೧೭- ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮಹಿಳೆಯರು ಕುಕ್ಕರ್ ಹಾಗೂ ಪುರುಷರು ಲಿಕ್ಕರ್‌ಗಾಗಿ ಮತವನ್ನು ಮಾರಿಕೊಂಡರೆ ಸಮುದಾಯದ ಅಭಿವೃದ್ಧಿ ಶೂನ್ಯವಾಗಿರುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಹಾಸಂಸ್ಥಾನಮಠದ ಶ್ರೀಗಳಾದ ಜ್ಞಾನಪ್ರಕಾಶಸ್ವಾಮೀಜಿ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣದ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸಂವಿಧಾನದ ಮೂಲ ಆಶಯವಾದ ಸಾರ್ವಭೌಮ ಸಮಾಜವಾದಿ ಧರ್ಮ ನಿರೂಪಕ್ಷ ಪ್ರಜಾಪ್ರಭುತ್ವದ ಸಂರಕ್ಷಣೆಗಾಗಿ ಕೋಲಾರದಲ್ಲಿ ಕ.ದ.ಸಂ.ಸ ವಿಭಾಗ ಮಟ್ಟದ ಪ್ರಭುದ್ಧ ಭಾರತಕ್ಕಾಗಿ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ,ಸಂವಿಧಾನದಲ್ಲಿ ನೀಡಿರುವ ಮತವನ್ನು ಮಾರಾಟ ಮಾಡಿಕೊಂಡರೆ, ಮುಂದಿನ ಯುವ ಪೀಳಿಗೆಗೆ ಭವಿಷ್ಯದ ಮೇಲೆ ಪ್ರಭಾವ ಬೀರುವ ಪರಿಸ್ಥಿತಿ ನಿರ್ಮಾಣವಾಗುವ ಹಂತಕ್ಕೆ ತಲುಪುತ್ತದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಕೆಲವರು ತುಂಡು ತುಂಡು ಮಾಡಲು ಹೊರಟಿದ್ದಾರೆ ಎಂದು ದೂರಿದರು.
ದಲಿತ ಸಮುದಾಯದ ಮುಂದಿನ ದಿನಗಳಲ್ಲಿ ಜಾಗೃತರಾಗಿ, ಅಂಬೇಡ್ಕರ್ ಭಾರತ ಸಂವಿಧಾನವನ್ನು ಉಳಿಸಿ, ಧರ್ಮದ ಆಧಾರದಲ್ಲಿ ದೇಶವನ್ನು ಕಟ್ಟುವ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದರು. ದೇಶದ ಕೋಮುವಾದಿ ಮತ್ತು ಮನುವಾದಿಗಳಿಗೆ ಗ್ರಾಮಗಳಿಗೆ ಪ್ರವೇಶವಿಲ್ಲವೆಂದು ಮತ ಜಾಗೃತಿ ಅಭಿಯಾನ ಮಾಡಬೇಕಾಗಿದೆ ಎಂದರು. ದೇಶದಲ್ಲಿ ಜೈ ಭೀಮ್ ಗೆಲ್ಲಬೇಕು ಹೊರತು ಜೈ ಶ್ರೀರಾಮ್ ಅಲ್ಲ, ಇದರಿಂದ ಎಚ್ಚೆತ್ತು ಸಂಘಟನೆ ತಂಡ ತಂಡಗಳಾಗಿ ಹೋಗಿ, ಗ್ರಾಮಗಳಲ್ಲಿರುವ ಜನರನ್ನು ಎಚ್ಚರಿಸಬೇಕು.
ಜೈ ಭೀಮ್ ಎಂದು ಘೋಷಣೆ ಕೂಗುತ್ತಿದ್ದವರು, ಈಗ ಜೈ ಶ್ರೀರಾಮ್ ಎನ್ನುವ ಘೋಷಣೆ ಕೂಗಲು ಹೊರಟಿರುವುದು ಸರಿಯಲ್ಲ. ಇದರಿಂದ ಜಾಗೃತರಾಗದಿದ್ದರೆ ಪ್ರಬುದ್ಧ ಭಾರತ ಕಟ್ಟುವುದು ಅಸಾಧ್ಯವೆಂದು ತಿಳಿಸಿದರು.
ಕದಸಂಸ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದರೆ ೨೦೨೫ರಲ್ಲಿ ಭಾರತ ಸಂವಿಧಾನವನ್ನು ಬದಲಿಸುವ ಚಿಂತನೆಯನ್ನು ಹೊಂದಿದ್ದಾರೆ ಎಂದು ದೂರಿದರು.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆನ್ನು ಮುರಿಯುವ ಜತೆಯಲ್ಲಿ ಮಹಿಳೆಯನ್ನು ನಿಂದಿಸಿರುವ ಸಂಸದ ಎಸ್.ಮುನಿಸ್ವಾಮಿ ಅವರ ಬೆನ್ನನ್ನು ಮುರಿದು ತಕ್ಕ ಪಾಠ ಹೇಳಬೇಕು ಎಂದು ಎಚ್ಚರಿಸಿದರು. ಇನ್ನೂ ಮಹಿಳೆಯನ್ನು ನಿಂದಿಸಿರುವ ಸಂಸದ ಮುನಿಸ್ವಾಮಿ ಅವರ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಗೋಪಾಲ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್‌ರ ಅನುಯಾಯಿಗಳು ಆಗಲು ಅವರ ಜೀವನ ಚರಿತ್ರೆ ಯನ್ನು ತಿಳಿದುಕೊಳ್ಳುವ ಮೂಲಕ ದಾರಿಯಲ್ಲಿ ಸಾಗಿ ಪರಿಪಾಲನೆಯನ್ನು ಮಾಡಬೇಕಾಗಿದೆ ಎಂದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅವರ ಚಿಂತನೆಯನ್ನೂ ಮೈಗೂಡಿಸಿಕೊಳ್ಳದವರು, ನಿಜವಾಗಿಯೂ ಅಂಬೇಡ್ಕರ್ ಅವರ ಅಭಿಮಾನಿಯಾಗಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಸಹ ಸಮಾನವಾದ ಮತದಾನದ ಹಕ್ಕನ್ನು ನೀಡಲಾಗಿದೆ. ಆದರೆ ಮತ ಇಂದು ಮಾರಾಟ ವಸ್ತುವಾಗಿ ಆಗಿದ್ದು, ಸಮಾಜದ ಸಮುದಾಯಗಳ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದರು.
ಚುನಾವಣೆಯ ವೇಳೆಯಲ್ಲಿ ರಾಜಕಾರಣಿಗಳು ನೀಡುವ ೫೦೦ ರೂ. ಗಳು ಐದು ವರ್ಷದಲ್ಲಿ ದಿನಕ್ಕೆ ಅರ್ಧ ಪೈಸೆಯೂ ಸಹ ಸಿಗುವುದಿಲ್ಲ ಇದರ ವಿರುದ್ಧ ಪ್ರತಿಯೊಬ್ಬರು ಜಾಗೃತರಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸೂಲಿಕುಂಟೆ ರಮೇಶ್, ಬೆಂಗಳೂರು ವಿಭಾಗೀಯ ಸಂಚಾಲಕ ಹೆಚ್.ವೆಂಕಟೇಶ್, ರಾಜ್ಯ ಸಂಘಟನಾ ಸಂಚಾಲಕರಾದ ಮರೀಶ್ ನಾಗಣ್ಣವರ್, ವಿಜಯನರಸಿಂಹ,ಭೀಮಜ್ಯೋತಿ ಸೀನು, ಡಾ.ಮಲ್ಲೇಶಿ ಸಜ್ಜನ್, ಎಸ್.ಎನ್.ಬಳ್ಳಾರಿ, ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ದ.ನೌ.ಒ ರಾಜ್ಯಾಧ್ಯಕ್ಷ ಜೆ.ಶ್ರೀನಿವಾಸಲು ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಸಮುದಾಯದವರು ೬೦೦ ಜನರು ಭಾಗವಹಿಸಿದ್ದರು.
ಜಿಲ್ಲಾ ಸಂಚಾಲಕರುಗಳಾದ ಕೋಲಾರ ನಾಗನಾಳ ಮನಿಯಪ್ಪ ನಿರೂಪಿಸಿ, ಶಿವಮೊಗ್ಗ ಚಿನ್ನಯ್ಯ ಸ್ವಾಗತಿಸಿ, ತುಮಕೂರು ನಿಟ್ಟೂರು ರಂಗಸ್ವಾಮಿ ವಂದಿಸಿದರು.