ಮತಯಂತ್ರಕ್ಕೆ ಹಾನಿ: ತಡವಾಗಿ ಬೆಳಕಿಗೆ ಬಂದ ಪ್ರಕರಣ

ಮೈಸೂರು: ಮೇ.13:- ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾದ ವ್ಯಕ್ತಿಯೊಬ್ಬರು ಮತಯಂತ್ರವನ್ನು ಜಖಂಗೊಳಿಸಿರುವ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹೂಟಗಳ್ಳಿಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ.
ಶಿವಮೂರ್ತಿ ಎಂಬಾತ ಮತಯಂತ್ರ ನಿಯಂತ್ರಣ ಸಾಧನ ಒಡೆದು ಹಾಕಿರುವ ವ್ಯಕ್ತಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದನೆನ್ನಲಾದ ಶಿವಮೂರ್ತಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಡಿ ಮೈಸೂರಿನ ವಿಜಯನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತದಾನ ಮಾಡಲು ಬಂದ ವೇಳೆ ವಿದ್ಯುನ್ಮಾನ ಮತ ಯಂತ್ರದ ನಿಯಂತ್ರಣ ಸಾಧನವನ್ನು ಹೊಡೆದು ಹಾಕಿ ವಿಕೃತಿ ಮೆರೆದಿರುವ ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ನಿಂದು ಮತ ಹಾಕಲು ಮತಗಟ್ಟೆಯೊಳಕ್ಕೆ ಬಂದಿದ್ಧ ವ್ಯಕ್ತಿ ಬೆರಳಿಗೆ ಶಾಯಿ ಹಾಕಿಸಿಕೊಂಡು ಮತಯಂತ್ರದ ಬಳಿಗೆ ತೆರಳುವಾಗ ಏಕಾಏಕಿ ರೊಚ್ಚಿಗೆದ್ಧು ಮತಯಂತ್ರ ನಿಯಂತ್ರಣ ಸಾಧನವನ್ನು ಹೊಡೆದು ಹಾಕಿದರು.
ಮಾನಸಿಕ ಅಸ್ವಸ್ಥನಂತೆ ವರ್ತಿಸಿದ ವ್ಯಕ್ತಿಯ ದಾಂಧಲೆಯಿಂದ ಬೆಚ್ಚಿಬಿದ್ದ ಚುನಾವಣಾ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ಧ ಭದ್ರತಾ ಸಿಬ್ಬಂದಿ ಕೂಡಲೇ ಆಗಮಿಸಿ ವ್ಯಕ್ತಿಯನ್ನು ವಶಕ್ಕೆ ಪಡೆದ ನಂತರ ಮತದಾನ ಪ್ರಕ್ರಿಯೆ ಮುಂದುವರೆದಿದೆ.