ಮತದಾರ ತೀರ್ಪಿಗೆ ತಲೆಬಾಗಿದ ರಾಹುಲ್

ನವದೆಹಲಿ,ಡಿ.೪- ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನದಲ್ಲಿ ಜನತೆ ನೀಡಿರುವ ಜನಾದೇಶವನ್ನು ಕಾಂಗ್ರೆಸ್ ವಿನಮ್ರವಾಗಿ ಸ್ವೀಕರಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮೂರು ರಾಜ್ಯಗಳಲ್ಲಿ ಜನತೆ ನೀಡಿದ ತೀರ್ಪು ಸ್ವಾಗತಿಸುತ್ತೇವೆ. ಜೊತೆಗೆ ಸಿದ್ಧಾಂತದ ಆಧಾರದ ಯುದ್ಧ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಮೂರು ರಾಜ್ಯಗಳಲ್ಲಿನ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು,
“ನಾವು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ. ಜನರು ನೀಡಿದ ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ತೆಲಂಗಾಣದ ಜನರಿಗೆ ತುಂಬಾ ಕೃತಜ್ಞನಾಗಿದ್ದೇನೆ ಖಂಡಿತವಾಗಿಯೂ ತೆಲಂಗಾಣ ರಾಜ್ಯದ ಜನರಿಗೆ ನೀಡಿದ ಭರವಸೆ ಈಡೇರಿಸುತ್ತೇವೆ. ಅವರ ಶ್ರಮ ಮತ್ತು ಬೆಂಬಲಕ್ಕಾಗಿ ಎಲ್ಲಾ ಕಾರ್ಯಕರ್ತರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವನ್ನು ಶ್ಲಾಘಿಸಿದ್ದಾರೆ. ತೆಲಂಗಾಣ ಜನತೆ ಇತಿಹಾಸ ಸೃಷ್ಟಿಸಿ ಕಾಂಗ್ರೆಸ್ ಪಕ್ಷದ ಪರವಾಗಿ ಜನಾದೇಶ ನೀಡಿದ್ದಾರೆ ಎಂದರು.
ಇದು ತೆಲಂಗಾಣ ಜನತೆಯ ಗೆಲುವು. ಇದು ಜನರ ಗೆಲುವು. ರಾಜ್ಯದ ಮತ್ತು ಕಾಂಗ್ರೆಸ್‌ನ ಪ್ರತಿಯೊಬ್ಬ ಕಾರ್ಯಕರ್ತ. ತೆಲಂಗಾಣದ ಜನತೆಗೆ ಧನ್ಯವಾದಗಳು. ತೆಲಂಗಾಣದಲ್ಲಿ ಶಾಂತಿ, ಸಮೃದ್ಧಿ ಮತ್ತು ಪ್ರಗತಿಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದಿದ್ದಾರೆ.