ಮತದಾರರ ಹೆಸರು ನಾಪತ್ತೆ ಪ್ರಕರಣ ನ್ಯಾಯಕ್ಕಾಗಿ ನ್ಯಾಯಾಲಯಕ್ಕೆ ಮೊರೆ: ಬಿ.ಆರ್. ಪಾಟೀಲ್

ಕಲಬುರಗಿ.ಮೇ,30:ನನಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವುದು ಬೇಸರ ತರಿಸಿದೆ ಎಂದು ಆಳಂದ್ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಶಾಸಕನಾಗಿ ಆಯ್ಕೆಯಾದರೆ ಸಚಿವ ಸ್ಥಾನ ನೀಡುವುದಾಗಿ ನಾಯಕರು ಭರವಸೆ ನೀಡಿದ್ದರು. ಆದಾಗ್ಯೂ, ನಾಯಕರು ಕೊಟ್ಟ ಮಾತಿನಂತೆ ಸಚಿವ ಸ್ಥಾನ ಕೊಡಲಿಲ್ಲ. ನಾನು ಯಾರನ್ನು ನಂಬಿದ್ದೇನೋ ಅವರು ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಇದರಿಂದ ನಾನು ನಂಬಿ ಕೆಟ್ಟೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.
ನಾನು ಅಧಿಕಾರಕ್ಕೆ ಎಂದಿಗೂ ಅಂಟಿಕೊಂಡವನಲ್ಲ ಹಾಗೂ ಅಧಿಕಾರಕ್ಕಾಗಿ ಯಾರ ಬಳಿಯೂ ಬೆನ್ನು ಬಿದ್ದಿಲ್ಲ. ಅಧಿಕಾರಕ್ಕಾಗಿ ಭಿಕ್ಷೆ ಬೇಡುವ ಜಾಯಮಾನವೂ ನನ್ನದಲ್ಲ. ಆದಾಗ್ಯೂ, ನಾಯಕರೇ ನನಗೆ ಸಚಿವರಾಗಿ ಮಾಡುವುದಾಗಿ ಹೇಳಿದ್ದರು. ಕಳೆದ 35 ವರ್ಷಗಳಿಂದಲೂ ಆಳಂದ್ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಕ್ಷೇತ್ರದ ಜನರ ಬೇಡಿಕೆಯೂ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗಬೇಕು ಎಂದು ಬಯಸಿದ್ದರು. ಹಾಗಾಗಿ ನಾಯಕರ ಭರವಸೆ ಹಾಗೂ ಕ್ಷೇತ್ರದ ಪ್ರಾತಿನಿಧ್ಯಕ್ಕಾಗಿ ನಾನು ಸಚಿವ ಸ್ಥಾನದ ಆಕಾಂಕ್ಷೆ ಆಗಿದ್ದೆ. ಅದು ಈಡೇರಲಿಲ್ಲ ಎಂದು ಅವರು ಹೇಳಿದರು.
ನಾನು ಮೂಲತ: ರೈತರ ಪರವಾಗಿ ನಿರಂತರ ಹೋರಾಟ ಮಾಡಿಕೊಂಡು ಬಂದವನು. ಹಾಗಾಗಿ ಸಚಿವ ಸ್ಥಾನ ಸಿಗದೇ ಇದ್ದರೂ ಸಹ ನನಗೆ ಬೇಸರ ಇಲ್ಲ ಎಂದು ಹೇಳಿದ ಅವರು, ಈಗಲೂ ಸಹ ನನ್ನ ಹೋರಾಟಗಳು ಮುಂದುವರೆಯಲಿವೆ ಎಂದರು.
ಇನ್ನು ಆಳಂದ್ ಕ್ಷೇತ್ರದಲ್ಲಿನ 6900 ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಕುರಿತು ಪ್ರಸ್ತಾಪಿಸಿದ ಬಿ.ಆರ್. ಪಾಟೀಲ್ ಅವರು, ಕಳೆದ ಚುನಾವಣೆಯಲ್ಲಿ ನನಗೆ ಸೋಲಿಸಲು ಇಂತಹ ಶಡ್ಯಂತ್ರ ರೂಪಿಸಲಾಗಿತ್ತು. ಆ ಕುರಿತು ನಾನು ರಾಜ್ಯ ಚುನಾವಣಾ ಆಯುಕ್ತ ಭರತ್‍ಲಾಲ್ ಮೀನಾ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರಿಗೆ ಮನವಿ ಮಾಡಿ ತನಿಖೆ ಕೈಗೊಳ್ಳಲು ಕೋರಿದ್ದೆ. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಳ್ಳುವುದಾಗಿಯೂ ಭರವಸೆ ನೀಡಿದ್ದರು. ಆದಾಗ್ಯೂ, ಇಲ್ಲಿಯವರೆಗೂ ತನಿಖೆ ಆಗಿಲ್ಲ ಎಂದು ದೂರಿದರು.
ಆಳಂದ್ ಕ್ಷೇತ್ರದಲ್ಲಿ ಸುಮಾರು 6900 ಹೆಸರುಗಳನ್ನು ಕೋರಿಕೆಯ ಮೇಲೆ ತೆಗೆದುಹಾಕಿದ್ದು, ಆ ನಂಬರುಗಳಿಗೆ ದೂರವಾಣಿ ಕರೆ ಮಾಡಿದಾಗ ರಾಜಸ್ತಾನ್, ಜಾರ್ಖಂಡ್, ಬಿಹಾರ್, ಮಧ್ಯಪ್ರದೇಶದ್ದು ಇತ್ತು. ಯಾರಿಗೂ ಕೂಡ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವಂತೆ ಮನವಿ ಮಾಡಿರಲಿಲ್ಲ. ಅಮಾಯಕ ಮತದಾರರಿಗೂ ಸಹ ತಮ್ಮ ಹೆಸರು ಮತದಾರರ ಪಟ್ಟಿಯಿಂದ ತೆರವುಗೊಂಡಿದೆ ಎಂಬುದು ಗೊತ್ತಿರಲಿಲ್ಲ. ನಂತರ ಅವರ ಹೆಸರನ್ನು ಮರು ಸೇರ್ಪಡೆಗೊಳಿಸಲು ಮನವಿ ಮಾಡಿಕೊಂಡೆವು. ಆದಾಗ್ಯೂ, ಇಂತಹ ಗಂಭೀರ ಪ್ರಕರಣವನ್ನು ಚುನಾವಣಾ ಆಯೋಗವು ಮತ್ತು ಪೋಲಿಸ್ ಇಲಾಖೆಯು ತನಿಖೆ ಕೈಗೊಂಡಿಲ್ಲ. ಹೀಗಾಗಿ ನಾನು ನ್ಯಾಯಕ್ಕಾಗಿ ಉಚ್ಛ ನ್ಯಾಯಾಲಯದಲ್ಲಿ ಎರಡೂ ಇಲಾಖೆಗಳ ವಿರುದ್ಧ ರಿಟ್ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ನಾನು ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಅದೃಷ್ಟವಂತನಾದೆ. ಆದಾಗ್ಯೂ, ಅಕ್ರಮದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡಬೇಕು. ಹೀಗಾಗಿ ನಾನು ನ್ಯಾಯಾಲಯದ ಮೊರೆ ಹೋಗುವೆ ಎಂದು ಅವರು ತಿಳಿಸಿದರು.
ನಾನು ಚುನಾವಣೆಯ ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಭೇಟಿ ಮಾಡಿ ತನಿಖೆಯ ಕುರಿತು ಕೇಳಿದೆ. ಆಗ ಅವರು ಚುನಾವಣಾ ಆಯೋಗಕ್ಕೆ ಆನ್‍ಲೈನ್ ಶಿಷ್ಠಾಚಾರದ ಮಾಹಿತಿಯ ಕುರಿತು ಕೋರಿದಾಗ ಅದನ್ನು ಇಲ್ಲಿಯವರೆಗೂ ಕೊಟ್ಟಿಲ್ಲ ಎಂದು ತಿಳಿಸಿದ್ದು, ಹೀಗಾಗಿ ತನಿಖೆ ವಿಳಂಬವಾಗಿದೆ ಎಂಬ ಸ್ಪಷ್ಟನೆಯನ್ನು ಅವರು ನೀಡಿದರು. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆ. ಹಾಗಾಗಿ ಆ ಕುರಿತು ನಾನು ಮಾತನಾಡಲಾರೆ. ಆದಾಗ್ಯೂ, ಮತದಾರರ ಪಟ್ಟಿಯಲ್ಲಿ ಹೆಸರುಗಳ ನಾಪತ್ತೆ ಪ್ರಕರಣದ ಕುರಿತು ಆನ್‍ಲೈನ್ ಶಿಷ್ಟಾಚಾರದ ಮಾಹಿತಿಯನ್ನು ಒದಗಿಸಬೇಕಿತ್ತು. ವಿಳಂಬ ನೀತಿ ಅನುಸರಿಸಬಾರದಿತ್ತು. ಆದ್ದರಿಂದ ಈಗಲಾದರೂ ಸಹ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ಉಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ಧರಾಮ್ ಪ್ಯಾಟಿ, ರವಿ ದೇವಾಂಗ್, ದತ್ತು ಮುಂತಾದವರು ಉಪಸ್ಥಿತರಿದ್ದರು.