ಮತದಾರರ ಮಾಹಿತಿ ದುರ್ಬಳಕೆ, ಕೈ ನಾಯಕರನ್ನು ಬಂಧಿಸಲಿ: ಡಿಕೆಶಿ ಸವಾಲು

ಬೆಂಗಳೂರು, ನ.18- ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ದುರ್ಬಳಕೆ ಮಾಡಿದ್ದರೆ ನಮ್ಮನ್ನು ಬಂಧಿಸಲಿ. ನಮ್ಮ ಅವಧಿಯಲ್ಲಿ ಯಾವ ಅಧಿಕಾರಿ, ಮಂತ್ರಿಗಳು ಅದಕ್ಕೆ ಅವಕಾಶ ನೀಡಿದ್ದರೋ ನನಗೆ ಗೊತ್ತಿಲ್ಲ. ಇದು ಗಂಭೀರ ಅಪರಾಧವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ಚುನಾವಣಾ ಆಯೋಗವು ಈ ವಿಚಾರವನ್ನು ಡಿವಿಸಿಗೆ (ವಿಭಾಗೀಯ ಅಧಿಕಾರಿ) ನೀಡಿದ್ದು, ಇದು ಡಿವಿಸಿಯಿಂದ ತನಿಖೆಯಾಗುವ ವಿಚಾರವಲ್ಲ. ನಾಳೆ ನಾವು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಲು ಸಮಯ ಕೇಳಿದ್ದೇವೆ ಎಂದು ತಿಳಿಸಿದರು.
ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಗೌರವ್ ಗುಪ್ತಾ ಅವರು ಏಕಾಏಕಿ ಹಿಂಪಡೆದಿದ್ದಾರೆ. ಆದರೆ ಈಗಾಗಲೇ ಈ ಸಂಸ್ಥೆಯ ಸುಮಾರು 7-8 ಸಾವಿರ ಸಿಬ್ಬಂದಿ ಮನೆ, ಮನೆಗೆ ಹೋಗಿ ಮತದಾರರ ಮಾಹಿತಿ ಕಲೆ ಹಾಕಿದ್ದಾರೆ ಎಂದರು.
ಮತ್ತೊಂದೆಡೆ ಕೆಲವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೇಳುತ್ತಿರುವ ವರದಿಗಳನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ ಎಂದು ತಿಳಿಸಿದರು.
ಈ ಸಂಸ್ಥೆಯ ಕಾರ್ಯವ್ಯಾಪ್ತಿ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿದ್ದವರಿಂದಲೇ ಮಾಹಿತಿ ಕಲೆ ಹಾಕಿದ್ದೇನೆ. ಅವರು ಜನ ಪ್ರತಿನಿಧಿಗಳ ಬಳಿ ಹೋಗಿ ನಾವು ನಿಮ್ಮನ್ನು ಗೆಲ್ಲಿಸುತ್ತೇವೆ ಎಂದು ಪ್ರತಿ ವಾರ್ಡ್ ನಲ್ಲಿ ಕಾರ್ಪೊರೇಟರ್ ಬಳಿ 1 ಕೋಟಿ ಹಣ ಕೇಳಿದ ಬಗ್ಗೆ ಹಲವರು ಮಾಹಿತಿ ನೀಡಿದ್ದಾರೆ. ಈ ವಿಚಾರದಲ್ಲಿ ನಾವು ಕೂಡ ತನಿಖೆ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಉಡಾಫೆಯಾಗಿ ಮಾತನಾಡಬಾರದು. ಮುಖ್ಯಮಂತ್ರಿಗಳು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರು ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ಹೊಂದಿರಬೇಕು. ಯಾವ ಕ್ಷೇತ್ರಗಳಲ್ಲಿ ಎಷ್ಟು ವಾರ್ಡ್ ಗಳಲ್ಲಿ ಮಾಹಿತಿ ಕಲೆ ಹಾಕಿದ್ದಾರೆ, ಖಾಲಿ ಮನೆ, ನಿವೇಶನಗಳನ್ನು ಗುರುತಿಸಿ ಅವುಗಳ ದುರ್ಬಳಕೆಗೆ ಹೇಗೆ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿ, ಈ ಸಂಸ್ಥೆಗೆ ಅನುಮತಿ ಆದೇಶ ನೀಡಿದ್ದಾರೆ. ಆದರೂ ಆಯೋಗದವರು ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನಾವು ಪೊಲೀಸ್ ಕಮಿಷನರ್ ಅವರಿಗೆ ಕೊಟ್ಟಿರುವ ದೂರಿನ ಮಾಹಿತಿಯನ್ನು ಇ ಮೇಲ್ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇವೆ. ನಾಳೆ ಮಧ್ಯಾಹ್ನ ಚುನಾವಣಾ ಆಯೋಗದ ಅಧಿಕಾರಿಗಳನ್ನು ನಾನು, ಸಿದ್ದರಾಮಯ್ಯ ಹಾಗೂ ಇತರ ನಾಯಕರು ಭೇಟಿ ಮಾಡಲಿದ್ದೇವೆ ಎಂದರು.
ಆ ಗುರುತಿನ ಚೀಟಿ ಮಾಡಿದವರು ಯಾರು? ಈ ಗುರುತಿನ ಚೀಟಿ ವಿತರಣೆ ಮಾಡಿರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧಿಕಾರಗಳ ವಿರುದ್ಧವೂ ಎಫ್ಐಆರ್ ಆಗಬೇಕು. ಸರ್ಕಾರಿ ಹುದ್ದೆಯನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ನಾನು ಮುಖ್ಯಮಂತ್ರಿ ಹಾಗೂ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಮ್ಮ ಸರ್ಕಾರವದ ಅವಧಿಯಲ್ಲಿ ನಾನು, ಅಥವಾ ಕುಮಾರಸ್ವಾಮಿ ಇಲ್ಲವೆ ಬೆಂಗಳೂರಿನ ಯಾವುದೇ ಸಚಿವರು, ಶಾಸಕರು ಈ ಕೆಲಸ ಮಾಡಿದ್ದರೆ ನಮ್ಮ ವಿರುದ್ಧವೂ ಕ್ರಮ ಕೈಗೊಳ್ಳಲಿ. ಈ ವಿಚಾರದಿಂದಲೂ ದೇಶದ ಮುಂದೆ ರಾಜ್ಯದ ಮಾನ ಹರಾಜಾಗುತ್ತಿದೆ‌ ಎಂದು ಡಿಕೆಶಿ ನುಡಿದರು.
ಮುಖ್ಯಮಂತ್ರಿಗಳು ಇದರ ಗಂಭೀರತೆ ಅರಿಯಬೇಕು. ಮತದಾನದ ಹಕ್ಕು ಮೂಲಭೂತ ಹಕ್ಕಾಗಿದ್ದು, ಅದನ್ನು ಕಸಿಯುವ ಅಕ್ರಮ ಮಾಡಲಾಗಿದೆ. ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯದಿಂದ ಇಂತಹ ಅಕ್ರಮಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾರರಿಗೆ ಮಾಡಿರುವ ಅಪಮಾನ‌ ಎಂದು‌ ಕಿಡಿಕಾರಿದರು
ಕಾಂಗ್ರೆಸ್ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು,
ಅವರು ತಡ ಮಾಡುತ್ತಿರುವುದೇಕೆ? ಮಾನನಷ್ಟ ಮೊಕದ್ದಮೆ ಹಾಕಲಿ. ಈ ವಿಚಾರಗಳು ಚರ್ಚೆ ಆಗಲಿ. ಅವರಿಗೆ ಅಪಮಾನವಾಗಿದ್ದರೆ ಹಾಕಲಿ. ನಮ್ಮ ಬಳಿಯೂ ಈ ಸಂಸ್ಥೆಯ ಎಲ್ಲ ಅಕ್ರಮ ದಾಖಲೆಗಳಿವೆ. ಕಳೆದ ಬಾರಿ ನಮ್ಮ ಪಕ್ಷದಲ್ಲಿ ಇದ್ದ ಮುನಿರತ್ನ ಅವರೆ ನಕಲಿ ಮತದಾರರ ಗುರುತಿನ ಚೀಟಿ ಮಾಡಿದ್ದರು. ಈ ವಿಚಾರವಾಗಿ ಮುನಿರಾಜು ಅವರು ಪ್ರಕರಣ ದಾಖಲಿಸಿದ್ದು, ಇಲ್ಲಿಯವರೆಗೂ ಅದನ್ನು ಹಿಂಪಡೆದಿಲ್ಲ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಈ ವಿಚಾರದಲ್ಲಿ ಯಾಕೆ ಪ್ರಕರಣ ದಾಖಲಿಸಿಲ್ಲ. ಎಂದು ತರಾಟೆಗೆ ತೆಗೆದುಕೊಂಡರು.