ಮತದಾರರ ಮಾಹಿತಿ ಕಳವಿಗೆ ಸಿಎಂ ಕಿಂಗ್ ಪಿನ್ : ರಾಜೀನಾಮೆಗೆ ಕೈ ನಾಯಕರ ಆಗ್ರಹ

ಬೆಂಗಳೂರು,ನ.-19- ನಗರದಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣದ ಪ್ರಮುಖ ಕಿಂಗ್ ಪಿನ್ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಎಂದು ಕಾಂಗ್ರೆಸ್ ಇಂದಿಲ್ಲಿ ಗಂಬೀರ ಆರೋಪ ಮಾಡಿದೆ

ಮತದಾರರ ಮಾಹಿತಿ ಕಳವು ಪ್ರಕರಣದ ನ್ಯಾಯಸಮ್ಮತ ತನಿಖೆಗೆ ಅವರು ತಮ್ಮ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು. ಅವರ ವಿರುದ್ಧ ಎಫ್ಐಆರ್ ದಾಖಲಾಗಿ ಅವರ ಬಂಧನವಾಗಬೇಕು’ ಎಂದು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಉಸ್ತವಾರಿ ರಣದೀಪ್ ಸುರ್ಜೇವಾಲ ಮಾತನಾಡಿ ಮತದಾರರ ಮಾಹಿತಿ ಕಳವು ಹಗರಣವು ಬಸವರಾಜ ಬೊಮ್ಮಾಯಿ ಅವರೇ ನಿಜವಾದ ಕಿಂಗ್ ಪಿನ್ ಎಂದು ಸಾಬೀತುಪಡಿಸಿದೆ. ಮುಖ್ಯಮಂತ್ರಿಯಾಗಿ ಅವರು ಎಂದಿನಂತೆ ಸುಳ್ಳಿನ ಮೂಲಕ ಸತ್ಯಾಂಶ ಮರೆಮಾಚಲು ಮುಂದಾಗಿದ್ದಾರೆ ಎಂದರು.

ದೇಶದ ಇತಿಹಾಸದಲ್ಲಿ ಇದೊಂದು ದೊಡ್ಡ ಹಗರಣ. ಆ ಮೂಲಕ ಕನ್ನಡಿಗರ ಮತದಾನದ ಹಕ್ಕು ಕಸಿಯುವ ಪ್ರಯತ್ನ ಮಾಡಲಾಗಿದೆ. ಪ್ರತಿ ಗಂಟೆಯೂ ಬಿಜೆಪಿ ಸರ್ಕಾರ ಹೇಗೆ ರಾಜಕೀಯ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ದೂರಿದ್ದಾರೆ.

ಬೆಂಗಳೂರು ಉಸ್ತುವಾರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಗೂ ಬಿಬಿಎಂಪಿ ಆಯುಕ್ತರ ವಿರುದ್ಧ ಯಾಕೆ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಪ್ರಶ್ನಿಸಿದರು

ಚಿಲುಮೆ ಸಂಸ್ಥೆ ಮೂಲಕ ಮತದಾರರ ಮಾಹಿತಿ ಕಳ್ಳತನ ಮಾಡಿರುವ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಬಿಬಿಎಂಪಿ ಆಯುಕ್ತರನ್ನು ವಿಚಾರಣೆ ನಡೆಸಬೇಕಾಗಿದ್ದು, ಕೆಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಒಂದಿಬ್ಬರು ಬಿಎಲ್ಒ ಗಳ ಮೇಲೆ ಎಫ್ಐಆರ್ ದಾಖಲಿಸಿರುವುದು ಏಕೆ ಎಂದಿದ್ದಾರೆ.

ಇದುವರೆಗೂ ಚಿಲುಮೆ ಎಜುಕೇಶನ್ ಅಂಡ್ ರೂರಲ್ ಡೆವಲಪ್ಮೆಂಟ್ ಸಂಸ್ಥೆ, ಚಿಲುಮೆ ಎಂಟರ್ ಪ್ರೈಸಸ್ ಪ್ರೈ.ಲಿ ಹಾಗೂ ಡಿಎಪಿ ಹೊಂಬಾಳೆ ಪ್ರೈ.ಲಿ ಸಂಸ್ಥೆಗಳ ನಿರ್ದೇಶಕರ ಕೃಷ್ಣಪ್ಪ ರವಿಕುಮಾರ್, ಭೈರಪ್ಪ ಶೃತಿ, ನರಸಿಂಹಮೂರ್ತಿ ಐಶ್ವರ್ಯ ವಿರುದ್ಧ ಎಫ್ಐಆರ್ ದಾಖಲಿಸಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ನಮ್ಮ ಬಳಿ ಎಲ್ಲ 28 ಕ್ಷೇತ್ರಗಳಲ್ಲಿ ಮತದಾರರ ಮಾಹಿತಿ ಕಲೆಹಾಕಲು ಅನುಮತಿ ನೀಡಿರುವ ದಾಖಲೆಗಳು ಇವೆ. ಬಿಬಿಎಂಪಿಯವರು ಚಿಲುಮೆ ಸಂಸ್ಥೆಗೆ ಅನುಮತಿ ಪತ್ರ ಬರೆದಿದ್ದಾರೆ ಎಂದರು.

ಚುನಾವಣಾ ಆಯೋಗ ಯಾವುದೇ ಅಧಿಕಾರಿಗಳ ಹೆಗಲಿಗೆ ಇದರ ಜವಾಬ್ದಾರಿ ಹಾಕಿ ಸುಮ್ಮನಾಗಬಾರದು. ನಿಮ್ಮದು ಸ್ವಾಯತ್ತ ಸಂಸ್ಥೆಯಾಗಿದ್ದು, ನೀವು ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಮೂರ್ತಿಗಳಿಂದ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮತದಾರರ ಮಾಹಿತಿ ಕಳ್ಳತನ ಪ್ರಕರಣವಾಗಿದ್ದು, ಇದು ನಂಬಿಕೆ ದ್ರೋಹ, ಸಾರ್ವಜನಿಕ ಅಧಿಕಾರಿಯ ವೇಷದಲ್ಲಿ ಮಾಡಲಾದ ಮೋಸ, ಮಾಹಿತಿ ಕಳ್ಳತನ ಪ್ರಕರಣವಾಗಿದೆ. ಇದು ಹಣಕಾಸಿನ ಅವ್ಯವಹಾರ, ಪಿತೂರಿ, ಖಾಸಗಿ ಹಕ್ಕಿನ ಚ್ಯುತಿ ಪ್ರಕರಣವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಬಿಬಿಎಂಪಿ ಅಧಿಕಾರಿಗಳವರೆಗೂ ಎಲ್ಲರೂ ತಪ್ಪಿತಸ್ಥರಾಗಿದ್ದಾರೆ ಎಂದರು.