ಮತದಾರರ ಮನ ಗೆಲ್ಲಲು ಕಾರ್ಯಕರ್ತರು ಮುಂದಾಗಿ: ವಿಜಯಸಿಂಗ್

ಬಸವಕಲ್ಯಾಣ:ಎ.14: ಕಾಂಗ್ರೇಸ್ ಪಕ್ಷದ ವರಿಷ್ಠರು ನನ್ನ ಮೇಲೆ ವಿಶ್ವಾಸವಿಟ್ಟು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ. ಅವರಿಗೆ ನಿರಾಸೆಯಾಗದಂತೆ ಕಾರ್ಯಕರ್ತರು ಶ್ರಮಿಸಿ ಕಾಂಗ್ರೇಸ್ ಗೆಲ್ಲಿಸುವ ಮೂಲಕ ವರಿಷ್ಠರ ಕೈ ಬಲಪಡಿಸಲು ಶ್ರಮಿಸಬೇಕು ಎಂದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಮಾಜಿ ಎಮ್‍ಎಲ್‍ಸಿ ವಿಜಯಸಿಂಗ್ ಮನವಿ ಮಾಡಿದರು.
ನಗರದ ಹೊರವಲಯದಲ್ಲಿರುವ ಎಂ.ಎಂ.ಬೇಗ ಕಲ್ಯಾಣ ಮಂಟಪದಲ್ಲಿ ಬುಧವಾರ ಬ್ಲಾಕ್ ಕಾಂಗ್ರೇಸ್ ಸಮಿತಿಯಿಂದ ಹಮ್ಮಿಕೊಂಡ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಟಿಕೆಟ್‍ಗಾಗಿ ಅನೇಕರು ಅರ್ಜಿ ಹಾಕಿದರು. ಆದರೆ ವರಿಷ್ಠರು ನನಗೆ ನೀಡಿದ್ದಾರೆ ಉಳಿದವರು ನನ್ನ ಪರವಾಗಿ ಕೆಲಸ ಮಾಡಿ ಕಾಂಗ್ರೇಸ್ ಗೆಲ್ಲಿಸಲು ಮುಂದಾಗುತ್ತಾರೆ. ಅಲ್ಲದೆ ಕಾರ್ಯಕರ್ತರು ಬೂತ್ ಮಟ್ಟದಿಂದ ಕೆಲಸ ಮಾಡಿದಾಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲು ಸಹಕಾರಿಯಾಗುತ್ತದೆ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಎಮ್‍ಎಲ್‍ಸಿಯಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಮೂರು ವರ್ಷಗಳಿಂದ ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದೇನೆ ಮುಂದೆ ಶಾಸಕನಾಗಿ ಕೆಲಸ ಮಾಡಬೇಕು ಎಂಬ ಬಯಕೆ ಇದೆ. ವರಿಷ್ಠರು ಇದಕ್ಕೆ ಸಮ್ಮತಿಸಿ ಟಿಕೆಟ್ ನೀಡಿದ್ದಾರೆ ಆದರೆ ವಿಧಾನ ಸಭೆಗೆ ಹೋಗಬೇಕಾದರೆ ಕಾರ್ಯಕರ್ತರು ಮತದಾರರ ಮನ ಗೆದ್ದು ಆಶಿರ್ವದಿಸಲು ಶ್ರಮಿಸಬೇಕು ಎಂದು ಕಿವಿ ಮಾತು ಹೇಳಿದರು
ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬರುವಲ್ಲಿ ಯಾವುದೇ ಸಂದೇಹವಿಲ್ಲ ಅಲ್ಲದೆ ಕ್ಷೇತ್ರದಲ್ಲಿಯೂ ಸಹ ಕಾಂಗ್ರೇಸ್ ಪರ ಅಲೆ ಇದೆ. ಆದರೆ ಮರ್ಯಾದೆ, ಪ್ರಾಮಾಣಿಕವಾಗಿ ಚುನಾವಣೆ ನಡೆಸೋಣ ಮತದಾರರಿಗೆ ಅಭಿವೃದ್ದಿಯ ಕೆಲಸಗಳು ಮಾಡಲು ದೂರದೃಷ್ಟಿ ಇಟ್ಟುಕೊಂಡು ಕೆಲಸ ಮಾಡಲಾಗುವದು. ಅಲ್ಲದೆ ಈ ಹಿಂದೆ ಸಿದ್ದರಾಮಯ್ಯ ಸರಕಾರದಲ್ಲಿ ಅನೇಕ ಯೋಜನೆಗಳು ಜಾರಿಗೆ ತಂದರು. ಆದರೆ ಬಿಜೆಪಿ ಸರಕಾರ ಈ ಯೋಜನೆಗಳು ಕಡಿತಗೊಳಿಸಿದೆ. ಮುಂದೆ ನಮ್ಮ ಸರಕಾರ ಬಂದ ಮೇಲೆ ಈ ಯೋಜನೆಗಳ ಜೊತೆಗೆ ಈಗ ನೀಡುತ್ತಿರುವ ಗ್ಯಾರಂಟಿ ಕಾರ್ಡಗಳಲ್ಲಿ ನೀಡುವ ಈಡೇರಿಸಲಾಗುತ್ತದೆ ಎಂದು ತಿಳಿಸಿದರು.
ನಾನು ಬಡ ರೈತನ ಮಗನೆಂದು ಜನರಿಗೆ ಹೇಳುತ್ತಿರುವ ಶಾಸಕ ಶರಣು ಸಲಗರ ಅವರು ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಕಳಪೆ ಮಟ್ಟದ ರಸ್ತೆಗಳು ನಿರ್ಮಿಸಿ ಹಣ ಲೂಟಿ ಹೊಡೆದಿದ್ದಾರೆ ಮತದಾರರು ಸೂಕ್ಷಮವಾಗಿ ಗಮನಿಸುತ್ತಿದ್ದಾರೆ. ಇಂತಹವರಿಗೆ ಮತದಾರರು ಹೇಗೆ ಮತ ನೀಡುತ್ತಾರೆ ಎಂದು ಪ್ರಶ್ನಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ಈ ಹಿಂದೆ ಕ್ಷೇತ್ರದಲ್ಲಿ ಕಾಂಗ್ರೇಸ್ ಗೆಲುವು ಸಾಧಿಸಿತು. ಆದರೆ ವಿಧಿ ನಾರಾಯಣರಾವ ಅವರ ಬಲಿ ಪಡೆಯಿತು. ನಂತರ ನಡೆದ ಉಪ ಚುನಾವಣೆಯಲ್ಲಿ ಸರಕಾರ ಠಿಕಾಣಿ ಹೂಡಿ ಹಣ ತೋಲ್ಬಲದಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ಗೆದ್ದಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ನಗರ ಸಭೆ ಅಧ್ಯಕ್ಷೆ ಶಹಜಹಾನ ತನ್ವೀರ, ಶಾಂತಪ್ಪಾ ಜಿ. ಪಾಟೀಲ, ಬಸವರಾಜ ಸ್ವಾಮಿ, ಮೀರ ಅಮಾನತ ಅಲಿ, ಅಂಗದರಾವ ಜಗತಾಪ, ರೈಸೋದ್ದೀನ್ ಹಾಗೂ ಮಹಿಳಾ ಘಟಕದ ಅಧ್ಯಕ್ಷರಾದ ಅನುಸೂಯಾ, ಸವಿತಾ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಮೀರ ಅಜರಲಿ ನಗವರಂಗ, ತಹಸೀನ್ ಅಲಿ ಜಮಾದಾರ, ಸಂಜಯ ಸಿಂಗ್ ಹಜಾರಿ, ವಿಶ್ವನಾಥ ಖಳಾಳೆ, ಗಿರೀಶ ತಾಂಬೋಳೆ, ದೀಪಕ ಢೋಲೆ, ಜಿತೇಂದರ ಮಾಸ್ಟರ್ ಸೇರಿದಂತೆ ಮತ್ತಿತರಿದ್ದರು. ಬ್ಲಾಕ್ ಕಾಂಗ್ರೇಸ್ ತಾಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೊಳಿಸಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಸಂಘಟನೆಗಾಗಿ ಸಹಾಯ ಸಹಕಾರ ಮಾಡಲಾಗುವದು. ಯಾವುದೇ ಆಸೆ ಅಮೀಷಗಳಿಗೆ ಬಲಿಯಾಗದೆ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸಬೇಕು ಕಾರ್ಯಕರ್ತರು ನಿಮ್ಮ ಬೂತ್‍ಗಳಲ್ಲಿ ನಿವೇ ಅಭ್ಯರ್ಥಿ ಎಂದು ತಿಳಿದು ನಿಮಗೆ ವಹಿಸಿರುವ ಜವಬ್ದಾರಿ ಅರಿತು ಕೆಲಸ ಮಾಡಿದ್ದೇ ಆದಲ್ಲಿ ಅಭ್ಯರ್ಥಿ ಗೆಲಿವಿಗೆ ಸಹಕಾರಿಯಾಗಲಿದೆ
ನೀಲಕಂಠ ರಾಠೋಡ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ