ಮತದಾರರ ಪಟ್ಟಿ ಪರಿಷ್ಕರಣೆ: ಬೆಳೆ-ಮನೆ ಹಾನಿ ಪರಿಶೀಲನೆ


ಹಾವೇರಿ.ನ.22: ಹಾವೇರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಜಿಲ್ಲಾ ನೋಡಲ್ ಅಧಿಕಾರಿಗಳಾದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರಾದ(ಯೋಜನೆ) ಮನೋಜ್ ಜೈನ್ ಅವರು ಭಾನುವಾರ ಜಿಲ್ಲೆಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಶಾಲೆಗಳಿಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಪರಿಶೀಲನೆ ನಡೆಸಿದರು.
ಶಿಗ್ಗಾಂವ ತಾಲೂಕು ತಡಸ ಹಾಗೂ ತಿಮ್ಮಾಪೂರ ಮತಗಟ್ಟೆಗಳಿಗೆ ತೆರಳಿ ಮತದಾರರ ಪಟ್ಟಿಯ ಪರಿಷ್ಕರಣೆ ಅಂಗವಾಗಿ ಸೇರ್ಪಡೆ, ಮಾರ್ಪಾಡು, ತಿದ್ದುಪಡಿ ಪ್ರಕ್ರಿಯೆಗಳನ್ನು ಪರಿಶೀಲನೆ ನಡೆಸಿ ಮತಗಟ್ಟೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ತಿಮ್ಮಾಪೂರ ಗ್ರಾಮದಲ್ಲಿ ಅತಿವೃಷ್ಟಿಯಿಂದ ಭತ್ತದ ಫಸಲು ಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮೆಕ್ಕೆಜೋಳ ತಾಕುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾಗೂ ತಿಮ್ಮಾಪೂರ ಗ್ರಾಮದ ಮನೆಹಾನಿಯಾಗಿರುವ ಪ್ರದೇಶಕ್ಕೆ ಭೇಟಿ ಸಂತ್ರಸ್ಥರೊಂದಿಗೆ ಮಾತುಕತೆ ನಡೆಸಿ, ತ್ವರಿತವಾಗಿ ಸಂತ್ರಸ್ಥರಿಗೆ ಪರಿಹಾರ ಪಾವತಿಗೆ ಕ್ರಮವಹಿಸಿ, ಮನೆ ಹಾಗೂ ಬೆಳೆಹಾನಿ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪರಿಹಾರ ಸಾಫ್ಟವೇರ್‍ಗಳಲ್ಲಿ ಅಳವಡಿಸಿ ಎಂದು ಸೂಚನೆ ನೀಡಿದರು.
ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಶೀಲ್ದಾರ ಮಂಜುನಾಥ ಉಪಸ್ಥಿತರಿದ್ದರು. ಗ್ರಾಮದ ರೈತರು ಉಪಸ್ಥಿತರಿದ್ದರು.