ಮತದಾರರ ಪಟ್ಟಿ ಪರಿಶೀಲನೆ

ಬೆಂಗಳೂರು, ನ.೨೦- ರಾಜ್ಯದಲ್ಲಿ ಮತದಾರರ ಮಾಹಿತಿ ಕದ್ದ ಕಳವು ಪ್ರಕರಣ ಸದ್ದು ಮಾಡುತ್ತಿರುವ ಬೆನ್ನಲ್ಲೇ ಜಿಲ್ಲಾ ಚುನಾವಣಾಧಿಕಾರಿಗಳೂ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಕರಡು ಮತದಾರರ ಪಟ್ಟಿ ಪರಿಶೀಲನೆ ನಡೆಸಿದರು.ನಗರದಲ್ಲಿಂದು ವಿವಿಧ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರು, ಮತದಾರರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ವಿಶೇಷ ಅಭಿಯಾನ ಸದುಪಯೋಗ ಪಡಿಸಿಕೊಳ್ಳಲು ಮನವಿ ಮಾಡಿದರು.ಬೆಂಗಳೂರಿನಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಹಿನ್ನೆಲೆ ಗುರುತಿನ ಚೀಟಿ ಹೆಸರು ಸೇರ್ಪಡೆ, ತಿದ್ದುಪಡಿ, ಆಕ್ಷೇಪಣೆಗೆ ಅವಕಾಶ ನೀಡಿ ಡಿಸೆಂಬರ್ ೮ರವರೆಗೆ ಬಿಬಿಎಂಪಿ ವಿಶೇಷ ಅಭಿಯಾನ ಕೈಗೊಂಡಿದೆ.ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-೨೦೨೩ರ ಸಂಬಂಧ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರು ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು, ಹಾಗೂ ತಿದ್ದುಪಡಿ, ಸ್ಥಳಾಂತರಗೊಂಡಿದ್ದಲ್ಲಿ ನಮೂನೆ ೬, ೬ಎ,೭, ೮ ಅರ್ಜಿಗಳನ್ನು ಸಲ್ಲಿಸಲು ನವೆಂಬರ್ ೨೦ರಿಂದ ಡಿಸೆಂಬರ್ ೩ರವೆರೆಗೆ ಹಾಗೂ ಡಿಸೆಂಬರ್ ೮ ರಂದು ವಿಶೇಷ ಅಭಿಯಾನ ಕೈಗೊಂಡಿದೆ.