ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮತದಾರರ ಪಟ್ಟಿಯಲ್ಲಿ ಹೆಸರು ತಿದ್ದುಪಡಿಗೆ ಡಿ. 9 ರವರೆಗೆಕಾಲಾವಕಾಶ: ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ

ಬೀದರ:ಅ.28:ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ 2024 ರ ಅಂಗವಾಗಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬೀದರ ಜಿಲ್ಲೆಯ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ. ತೆಗೆದುಹಾಕುವದು ಸೇರಿದಂತೆ ಇತರೆ ಯಾವುದೇ ಸಮಸ್ಯೆಗಳಿದ್ದರೆ ಡಿಸೆಂಬರ 9 ರವರೆಗೆ ಕಾಲಾವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಚುರಪಡಿಸುವ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮುಖಂಡರಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕರಡು ಮತದಾರರ ಪಟ್ಟಿಯನ್ನು ತೈಯಾರಿಸಿ ಜಿಲ್ಲೆಯ ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ. ತಹಸೀಲ ಕಛೇರಿ, ಸಹಾಯಕ ಆಯುಕ್ತರ ಕಛೇರಿ, ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿ ಹಾಗೂ ನಿಗದಿತ ಸ್ಥಳಗಳ ಸೂಚನಾ ಫಲಕಕ್ಕೆ ಅಂಟಿಸಿ ಪ್ರಚುರ ಪಡಿಸಲಾಗುತ್ತಿದೆ ಎಂದರು.
ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯ ಒಂದು ಪ್ರತಿಯನ್ನು ಅನುಮೋದಿತ ರಾಜಕೀಯ ಪಕ್ಷದವರಿಗೆ ನೀಡಲಾಗಿರುತ್ತದೆ. ಸದರಿ ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳು ಇದ್ದಲ್ಲಿ ದಿನಾಂಕ 27-10-2023 ರಿಂದ 09-12-2023 ರ ಒಳಗಾಗಿ ಸಂಬಂಧಪಟ್ಟ ತಹಶೀಲ ಕಛೇರಿಯಲ್ಲಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ ಎಂದರು.
ಬೀದರ ಜಿಲ್ಲೆಯಲ್ಲಿ ಒಟ್ಟು 714506 ಪುರುಷ ಮತದಾರರು ಹಾಗೂ 670210 ಮಹಿಳಾ ಮತದಾರರಿದ್ದು ಒಟ್ಟು 1384716 ಮತದಾರರು ಜಿಲ್ಲೆಯಲ್ಲಿದ್ದು ಮತದಾರರು ತಮಗೆ ನೀಡಿದ ಕಾಲಾವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೆ ಕಾಲಾವಕಾಶವಿದ್ದು ಈ ಮಾಹಿತಿಯನ್ನು ರಾಜಕೀಯ ಪಕ್ಷಗಳ ಮುಖಂಡರು ಆಯಾ ತಾಲ್ಲೂಕಿನ ತಮ್ಮ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಬೇಕೆಂದು ಹೇಳಿದರು.
ಈ ಸಭೆಯಲ್ಲಿ ಚುನಾವಣಾ ತಹಶೀಲ್ದಾರ ಗೋಪಾಲ ಕಪೂರ್. ಭಾರತೀಯ ಜನತಾ ಪಕ್ಷದ ಜಿಲ್ಲಾ ವಕ್ತಾರರಾದ ಬಸವರಾಜ ಪವಾರ. ಜನತಾದಳ ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ. ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಅಂಬುಬಾಯಿ ಡಿ. ಮಾಳಗೆ. ಬಿ.ಎಸ್.ಪಿ ಜಿಲ್ಲಾಧ್ಯಕ್ಷರಾದ ಕಪಿಲ್ ಗೋಡಬೊಲೆ. ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.