ಮತದಾರರ ಪಟ್ಟಿಯ ತಯಾರಿಕೆ, ಪರಿಷ್ಕರಣೆಯಲ್ಲಿ ಬದಲಾವಣೆ: ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ

ವಿಜಯಪುರ, ಆ.1-ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿದ ಬಗ್ಗೆ ತಿಳಿಸುವುದಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಜುಲೈ 30ರಂದು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಭಾರತದ ಚುನಾವಣಾ ಆಯೋಗವು ವಿಧಾನಸಭೆ, ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 14(ಬಿ) ಮತ್ತು ಸೆಕ್ಷನ್ 23ರಲ್ಲಿನ ಕಾನೂನು ತಿದ್ದುಪಡಿಗಳನುಸಾರವಾಗಿ ಮತ್ತು ಮತದಾರರ ನೋಂದಣಿ ನಿಯಮಗಳು, 1960ರಲ್ಲಿನ ಮಾರ್ಪಾಡುಗಳ ಅನುಸಾರವಾಗಿ ಈ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಮೊದಲು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮತ್ತು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನ ಸಭಾ ಕ್ಷೇತ್ರಕ್ಕೆ ಮತದಾರರ ವರ್ಗಾವಣೆಗಾಗಿ ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಇದನ್ನು ಪರಿಷ್ಕರಿಸಿ ನಮೂನೆ-6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ ಮತ್ತು ಹೆಸರು ತೆಗೆದು ಹಾಕಲು ಚಾಲ್ತಿಯಲ್ಲಿರುವ ನಮೂನೆ-7ನ್ನು ಪರಿಷ್ಕರಿಸಲಾಗಿದೆ.
ಈ ಮೊದಲು ನಮೂನೆ-8ರಲ್ಲಿ ಮತದಾರರ ಪಟ್ಟಿಯಲ್ಲಿನ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲು ಅವಕಾಶವಿತ್ತು. ಪ್ರಸ್ತುತ ಪರಿಷ್ಕøತ ನಮೂನೆ 8 ರನ್ವಯ ಮತದಾರರ ಹೆಸರು, ವಿಳಾಸ ಮತ್ತು ಭಾವಚಿತ್ರಗಳಿಗೆ ಸಂಬಂಧಿಸಿದಂತೆ ತಿದ್ದುಪಡಿ ಜೊತೆಗೆ ಒಂದು ವಿಧಾನಸಭಾ ಕ್ಷೇತ್ರದಿಂದ ಬೇರೆ ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆ, ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವರ್ಗಾವಣೆ, ಬದಲಿ ಎಪಿಕ್‍ಗಾಗಿ ಮನವಿ ಮತ್ತು ಅಂಗವೈಕಲ್ಯ ಹೊಂದಿರುವ ಮತದಾರರು ತಮ್ಮ ಅಂಗವೈಕಲ್ಯ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ಯನ್ನು ರದ್ದುಪಡಿಸಲಾಗಿದೆ. ನಮೂನೆ-8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8ರಲ್ಲಿ ಒದಗಿಸಲಾಗಿದೆ. ಈ ಮೊದಲು, ಬದಲಿ ಎಪಿಕ್‍ಗಾಗಿ ನಮೂನೆ-001ರಲ್ಲಿ ಅರ್ಜಿ ಸಲ್ಲಿಸಲು ಇದ್ದ ಅವಕಾಶವನ್ನು ರದ್ದುಪಡಿಸಿ, ಸದರಿ ಅವಕಾಶವನ್ನು ಪರಿಷ್ಕರಿಸಿದ ನಮೂನೆ-8ರಲ್ಲಿ ಒದಗಿಸಲಾಗಿದೆ.
ಮತದಾರರ ಪಟ್ಟಿಯಲ್ಲಿನ ಮತದಾರರನ್ನು ದೃಢೀಕರಣದ ಉದ್ದೇಶದಿಂದ ಹೊಸದಾಗಿ ನಮೂನೆ- 6ಬಿ ಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ನೀಡಲಾಗಿದೆ. ಇದು ಮತದಾರರಿಗೆ ಸ್ವಯಂಪ್ರೇರಿತ ಅವಕಾಶವಿದ್ದು ಆಕಸ್ಮಾತ್ ಆಧಾರ್ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದಲ್ಲಿ ಮನ್ರೇಗಾ ಉದ್ಯೋಗ ಕಾರ್ಡ್, ಬ್ಯಾಂಕ್-ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕಗಳು, ಕಾರ್ಮಿಕ ಮಂತ್ರಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡು, ಡ್ರೈವಿಂಗ್ ಲೈಸನ್ಸ, ಪಾನ್ ಕಾರ್ಡ, ಎನ್ಪಿಆರ್ ಅಡಿಯಲ್ಲಿ ಆರ್ ಜಿ ಐ ಮೂಲಕ ನೀಡಲಾದ ಸ್ಮಾರ್ಟ್ ಕಾರ್ಡ್, ಇಂಡಿಯನ್ ಪಾಸ್ ಪೆÇೀರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಿಚಿತ್ರವಿರುವ ಸೇವಾ ಗುರುತಿನ ಚೀಟಿ., ಸಂಸತ್ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ., ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಸೇರಿದಂತೆ 11 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು ಒದಗಿಸಿ 01.08.2022 ರಿಂದ 31.03.2023ರೊಳಗೆ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಮೂನೆ-6ಬಿಯಲ್ಲಿ ಮಾಹಿತಿ ಧೃಢೀಕರಿಸಲು ಆನ್‍ನೈಲ್ ಮತ್ತು ಆಫ್‍ಲೈನ್‍ಎರಡರಲ್ಲೂ ಅವಕಾಶವಿದೆ. ಆನ್‍ಲೈನ್ ವ್ಯವಸ್ಥೆಯಡಿ ಎನ್‍ವಿಎಸ್‍ಪಿ ಮತ್ತು ವೋಟರ್ ಹೆಲ್ಪ ಲೈನ್ ಆಪ್‍ನಲ್ಲಿ ಮತದಾರರು ಮಾಹಿತಿಯನ್ನು ದೃಢೀಕರಿಸಲು ಅವಕಾಶವಿದೆ. ಆಧಾರ್ ಸ್ವಯಂ ದೃಢೀಕರಣಕ್ಕೆ ಆಧಾರ್ ಜೋಡಣೆಯಾಗಿರುವ ಮೊಬೈಲ್‍ಗೆ ಸ್ವೀಕೃತವಾಗುವ ಒಟಿಪಿ ಸೌಲಭ್ಯವನ್ನು ಒದಗಿಸಿದೆ. ಆಕಸ್ಮಾತ್ ಒಟಿಪಿ ಸಹಿತ ದೃಢೀಕರಣ ಸಾಧ್ಯವಾಗದಿದ್ದಲ್ಲಿ ಮತದಾರರು ಆಧಾರ್‍ನ್ನು ಮೇಲಿನ ಆಪ್‍ಗಳಲ್ಲಿ ಅಪೆÇ್ಲೀಡ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಆಕಸ್ಮಾತ್ ಅಪೆÇ್ಲೀಡ್ ಮಾಡುವುದು ಸಾಧ್ಯವಾಗದಿದ್ದಲ್ಲಿ ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿಗೆ ನಮೂನೆ-6 ಬಿಯಲ್ಲಿ ಹಾರ್ಡ್ ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ಅರ್ಜಿಯನ್ನು ಮತದಾರರ ಅನುಕೂಲ ಕೇಂದ್ರಗಳು, ಇ-ಸೇವಾ ಕೇಂದ್ರಗಳು ಮತ್ತು ನಾಗರೀಕ ಸೇವಾ ಕೇಂದ್ರಗಳು ಹಾಗೂ ಮತದಾರರ ನೋಂದಣಿ ಅಧಿಕಾರಿ/ಸಹಾಯಕ ಮತದಾರರ ನೋಂದಣಿ ಅಧಿಕಾರಿ ಕಚೇರಿಯಲ್ಲೂ ಸಲ್ಲಿಸಬಹುದಾಗಿದೆ ಎನ್ನುವ ಮಾಹಿತಿಯನ್ನು ವ್ಯಾಪಕವಾಗಿ ತಿಳಿಸಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಚುನಾವಣಾ ತಹಸೀಲ್ದಾರ ಶಾಂತಲಾ ಚೆಂದನ್, ವಿವಿಧ ರಾಜಕೀಯ ಪಕ್ಷಗಳ ಮಹ್ಮದ್ ಇರ್ಪಾನ್ ಎಂ ಶೇಖ್, ಶರಣಬಸಪ್ಪ ಕುಂಬಾರ, ಎಂ.ಕೆ.ಬಾಗಾಯಟ್, ಕೆ.ಆರ್.ತೊರವಿ, ಚನ್ನಬಸಪ್ಪ ನಂದರಗಿ ಸೇರಿದಂತೆ ಇತರರು ಇದ್ದರು.