ಮತದಾರರ ಪಟ್ಟಿಯ ಗುಣಮಟ್ಟ ಸುಧಾರಿಸಲು ಚುನಾವಣಾ ಆಯೋಗದಿಂದ ಕ್ರಮ: ಡಾ.ವಿಜಯಮಹಾಂತೇಶ ದಾನಮ್ಮನವರ

ವಿಜಯಪುರ, ಜು.31-1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 14(ಬಿ) ಮತ್ತು ಸೆಕ್ಷನ್ 23 ರಲ್ಲಿನ ಕಾನೂನು ತಿದ್ದುಪಡಿಗಳನುಸಾರವಾಗಿ ಮತ್ತು ಮತದಾರರ ನೋಂದಣಿ ನಿಯಮಗಳು, 1960ರಲ್ಲಿನ ಮಾರ್ಪಾಡುಗಳ ಅನುಸಾರವಾಗಿ ಭಾರತದ ಚುನಾವಣಾ ಆಯೋಗವು ವಿಧಾನಸಭೆ, ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜುಲೈ 30ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವ ಈ ಪ್ರಕ್ರಿಯೆಯಿಂದ ಯುವ ಸಮುದಾಯದವು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಸಾಕಷ್ಟು ಅನುಕೂಲತೆಗಳಿವೆ. ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅವಕಾಶಗಳಿದ್ದು, ಮೊದಲಿದ್ದಂತೆ ಅರ್ಹತಾ ದಿನಾಂಕದವರೆಗೆ ಕಾಯಬೇಕಾಗಿಲ್ಲ. 17+ ವಯಸ್ಸಿನ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ. ಮತದಾರರ ನೋಂದಣಿಗಾಗಿ ಹೊಸ ಅರ್ಜಿ ನಮೂನೆಗಳನ್ನು ಸರಳೀಕರಿಸಲಾಗಿದೆ. ಮತದಾರರ ಪಟ್ಟಿಗೆ ಸ್ವಯಂಪ್ರೇರಿತ ಆಧಾರ್ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸೂಕ್ತ ತಿದ್ದುಪಡಿ: ಜನತಾ ಪ್ರಾತಿನಿಧ್ಯ ಕಾಯಿದೆ 1950 ರ ಪ್ರಕರಣ: 14(ಬಿ) ಮತ್ತು ಮತದಾರರ ನೋಂದಣಿ ನಿಯಮಗಳು 1960ರಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗಿದೆ. ಅದರಂತೆ, ಪ್ರಸ್ತುತ ಜಾರಿಯಲ್ಲಿರುವ ಜನವರಿ, 01ರ ಅರ್ಹತಾ ದಿನಾಂಕದ ಜೊತೆಗೆ 1ನೇ ಏಪ್ರಿಲ್, 1ನೇ ಜುಲೈ ಮತ್ತು 01ನೇ ಅಕ್ಟೋಬರ್‍ದಂದು ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮುಂದೆ ಮತದಾರರ ಪಟ್ಟಿಯನ್ನು ಪ್ರತಿ ತ್ರೈಮಾಸಿಕದಲ್ಲಿ ಕಾಲೋಚಿತಗೊಳಿಸಲಾಗುವುದು. ಇದರಿಂದ ಆ ತ್ರೈಮಾಸಿಕದಲ್ಲಿ 18 ವರ್ಷ ತುಂಬುವ ಅರ್ಹ ಮತದಾರರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಜೊತೆ ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಿಸಲಾಗುವ್ಯದು. ಪ್ರಸಕ್ತ 2023ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ 1ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ 2022ಕ್ಕೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣೆಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣಿಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ವಾರ್ಷಿಕ ಸಂಕ್ಷಿಪ್ತ ಪರಿಷ್ಕರಣೆ: ಭಾರತ ಚುನಾವಣಾ ಆಯೋಗವು 01.01.2023ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ. ಈ ಪ್ರಕ್ರಿಯೆಯಡಿ 04-08-2022 ರಿಂದ 24-10-2022ರ ಅವಧಿಯಲ್ಲಿ ವಿವಿಧ ಪೂರ್ವ ಪರೀಷ್ಕರಣಾ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಮತದಾರರ ಪಟ್ಟಿ ಸರಿಪಡಿಸುವುದು: ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ ಹೊಸ ಮತಗಟ್ಟೆ ಸ್ಥಾಪನೆ, ಅವಶ್ಯವಿದ್ದಲ್ಲಿ ಮತದಾರರ ಪಟ್ಟಿಯಲ್ಲಿನ ವಿಭಾಗಗಳನ್ನು ಸರಿಪಡಿಸುವುದು., ಮತದಾರರ ಪಟ್ಟಿಯಲ್ಲಿ ಒಬ್ಬರೇ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯುವುದು., ಮತದಾರರ ಭಾವಚಿತ್ರ ಅಸ್ಪಷ್ಟವಾಗಿದ್ದಲ್ಲಿ ಸ್ಪಷ್ಟ ಭಾವಚಿತ್ರಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಕಾಲೋಚಿತಗೊಳಿಸುವ ಮೂಲಕ ಮತದಾರರ ಪಟ್ಟಿಯನ್ನು ಸರಿಪಡಿಸಲಾಗುವುದು ಎಂದು ತಿಳಿಸಿದರು.
ನವೆಂಬರ್ 9ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ: 09-11-2022ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. 09.11.2022 ರಿಂದ 08.12.2022ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಕ್ಲೇಮು ಮತ್ತು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ತಕರಾರು ಸಲ್ಲಿಸಲು ಅವಕಾಶವಿದ್ದು, 05.01.2023 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಬಿಎಲ್‍ಓ ನೇಮಿಸಲು ಅವಕಾಶ: ರಾಜಕೀಯ ಪಕ್ಷಗಳು, ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಬೂತ್ ಲೆವೆಲ್-ಏಜೆಂಟ್‍ಗಳನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬೂತ್ ಲೆವೆಲ್ ಏಜೆಂಟ್‍ಗಳು ಸಂಬಂಧಪಟ್ಟ ಬೂತ್ ಲೆವೆಲ್ ಅಧಿಕಾರಿಗೆ ದಿನಕ್ಕೆ 10 ನಮೂನೆಗಳನ್ನು ಸಲ್ಲಿಸಲು ಅವಕಾಶವಿದೆ. ಕ್ಲೇಮು ಮತ್ತು ತಕರಾರುಗಳನ್ನು ಸಲ್ಲಿಸುವ ಅವಧಿಯಲ್ಲಿ ಒಬ್ಬ ಬೂತ್ ಲೆವೆಲ್ ಏಜೆಂಟ್ 30ಕ್ಕಿಂತ ಹೆಚ್ಚು ನಮೂನೆಗಳನ್ನು ಸಲ್ಲಿಸಿದಲ್ಲಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಪರಿಶೀಲನೆ ಮಾಡುವರು. ನಮೂನೆಗಳ ಅರ್ಜಿ ಸಹಿತ ತಾನು ನೀಡಿರುವ ಅರ್ಜಿಗಳನ್ನು ಸ್ವತಃ ಪರಿಶೀಲನೆ ಮಾಡಿರುವುದಾಗಿ ಬೂತ್ ಲೆವೆಲ್ ಏಜೆಂಟ್‍ಗಳು ದೃಢೀಕರಣ ಸಲ್ಲಿಸಬೇಕು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಚುನಾವಣಾ ತಹಸೀಲಾರ ಶಾಂತಲಾ ಚಂದನ್ ಇದ್ದರು.