ಮತದಾರರ ಪಟ್ಟಿಯಿಂದ ಮೃತಪಟ್ಟವರ ಹೆಸರು ತೆಗೆದು ಹಾಕಲು ಸಲಹೆ

ಶಿವಮೊಗ್ಗ, ಜ.೧೪;: ಮತದಾರರ ಪಟ್ಟಿಯಿಂದ ಮೃತಪಟ್ಟವರ ಹೆಸರನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಮತದಾರರ ಪಟ್ಟಿ ಪರಿಷ್ಕರಣೆ ಜಿಲ್ಲಾ ನೋಡಲ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು ತಿಳಿಸಿದರು.ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಮರಣ ಪ್ರಮಾಣ ಸಾವಿರಕ್ಕೆ ಸುಮಾರು ಶೇ.6ರಷ್ಟಿದ್ದು, ಪ್ರತಿ ತಿಂಗಳು ಮೃತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು. ಮರಣ ಪ್ರಮಾಣ ಇ-ಜನನ ಆಪ್‍ನಲ್ಲಿ ನೋಂದಣಿಯಾಗುತ್ತಿದ್ದು, ಅದರ ಆಧಾರದ ಮೇಲೆಯೂ ಹೆಸರನ್ನು ತೆಗೆದು ಹಾಕಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹುತೇಕ ಕಡೆ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಥಳೀಯವಾಗಿ ಹೆಚ್ಚಿನ ಮಾಹಿತಿ ಹಾಗೂ ಸಂಪರ್ಕ ಇರುವುದರಿಂದ ಮತದಾರರ ಪಟ್ಟಿಯನ್ನು ಹೆಚ್ಚು ಸಮರ್ಪಕವಾಗಿ ಪರಿಷ್ಕರಿಸಲು ಸಾಧ್ಯವಿದೆ. ಆದರೆ ಮಾಹಿತಿಯನ್ನು ಅಪ್‍ಲೋಡ್ ಮಾಡುವ ಕುರಿತು ತಾಂತ್ರಿಕವಾಗಿ ಅವರು ಪರಿಣಿತಿಯನ್ನು ಸಾಧಿಸಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಘಟಿತ ಮಾತ್ರವಲ್ಲದೆ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರನ್ನು ಗುರುತಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಮಹಿಳೆಯರ ಅನುಪಾತ ಹೆಚ್ಚಿದ್ದು, ಅವರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕುರಿತು ವಿಶೇಷ ಗಮನ ಹರಿಸಬೇಕು. ಇದೀಗ ಕಾಲೇಜುಗಳು ಕ್ರಮೇಣ ಆರಂಭವಾಗುತ್ತಿದ್ದು, ಹೊಸ ಮತದಾರರ ಸೇರ್ಪಡೆಗೆ ಎಲ್ಲಾ ಕಾಲೇಜುಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.
ಇಪಿ ಅನುಪಾತ ತಗ್ಗಿಸಿ: ಜಿಲ್ಲೆಯಲ್ಲಿ ಮತದಾರರ ಮತ್ತು ಜನಸಂಖ್ಯೆ ಅನುಪಾತ ರಾಜ್ಯದ ಅನುಪಾತಕ್ಕಿಂತ ಹೆಚ್ಚಾಗಿದೆ. ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಪರಿಷ್ಕರಣೆ ಮಾಡುವ ಮೂಲಕ ಈ ಅನುಪಾತವನ್ನು ತಗ್ಗಿಸಬಹುದಾಗಿದೆ. ಮೃತಪಟ್ಟವರು, ಮದುವೆಯಾಗಿ ಹೋದವರು, ವಲಸೆ ಹೋದವರು ಮುಂತಾದವರನ್ನು ಗುರುತಿಸಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು. ಪಟ್ಟಿಯಿಂದ ಕೈಬಿಡುವ ಮೊದಲು ನೋಟೀಸ್ ಜಾರಿಗೊಳಿಸಬೇಕು. ಮತದಾರರ ಪಟ್ಟಿಯಿಂದ ತೆಗೆದು ಹಾಕಲಾದ ಹೆಸರುಗಳ ವಿವರಗಳನ್ನು ಮತಗಟ್ಟೆವಾರು ಒದಗಿಸುವಂತೆ ಅವರು ತಿಳಿಸಿದರು.
ಜಿಲ್ಲೆಯಲ್ಲಿ 2021ರ ಅಂದಾಜು ಜನಸಂಖ್ಯೆ ಒಟ್ಟು 1873978 ಇದ್ದು, ಇದರಲ್ಲಿ 928176 ಪುರುಷರು ಮತ್ತು 945802 ಮಹಿಳೆಯರು ಇದ್ದಾರೆ. ಇದೇ ವೇಳೆ ಮತದಾರರ ಪಟ್ಟಿಯಲ್ಲಿ 726792 ಪುರುಷರು, 737200 ಮಹಿಳೆಯರು ಸೇರಿದಂತೆ 1463992 ಮಂದಿ ಇದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮತದಾರರು ಮತ್ತು ಜನಸಂಖ್ಯೆಯ ಒಟ್ಟಾರೆ ಅನುಪಾತ ಪುರುಷರು ಶೇ.78.30, ಮಹಿಳೆಯರು ಶೇ. 77.94 ಮತ್ತು ಒಟ್ಟು ಶೇ. 78.12 ಆಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಇದು ಶೇ.82.11 ಆಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಮಾಹಿತಿ ನೀಡಿದರು. 
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಉಪವಿಭಾಗಾಧಿಕಾರಿ ಟಿ.ಪ್ರಕಾಶ್, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.