ಮತದಾರರ ಪಟ್ಟಿಯಲ್ಲಿ ಹೊರ ರಾಜ್ಯಗಳ ಹೆಸರು ಸೇರ್ಪಡೆ

ಬೆಂಗಳೂರು, ಮಾ.೧೩- ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹೊರ ರಾಜ್ಯಗಳ ಜನರನ್ನು ಮತದಾರರಾಗಿ ಪರಿವರ್ತಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸೋಮವಾರ ದಾಖಲೆಗಳ ಸಮೇತ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ ಅವರು, ಕೇವಲ ೯ ತಿಂಗಳ ಅವಧಿಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೇವಲ ೩ ವಾರ್ಡ್ ಗಳ ವ್ಯಾಪ್ತಿಯಲ್ಲಿ ೯,೧೫೩ ಮಂದಿಗೂ ಹೆಚ್ಚು ಮಂದಿ ಮತದಾರರನ್ನು ಸೇರ್ಪಡೆಯಾಗಿದ್ದಾರೆ ಎಂದರು.
ಬಿಬಿಎಂಪಿಯ ಜಯನಗರ ವಿಧಾನಸಭಾ ಕ್ಷೇತ್ರದ ಗುರಪ್ಪನಪಾಳ್ಯ ವಾರ್ಡ್ (ವಾರ್ಡ್ ಸಂಖ್ಯೆ ೧೭೧), ಜಯನಗರ ಪೂರ್ವ ವಾರ್ಡ್ (ವಾರ್ಡ್ ಸಂಖ್ಯೆ ೧೭೦) ಮತ್ತು ಭೈರಸಂದ್ರ ವಾರ್ಡ್ (ವಾರ್ಡ್ ಸಂಖ್ಯೆ ೧೬೯) ಗಳ ವ್ಯಾಪ್ತಿಯಲ್ಲಿ ೯ ತಿಂಗಳ ಅವಧಿಯಲ್ಲಿ ಒಟ್ಟು ೯,೧೫೩ ಮತದಾರರನ್ನು ಅಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಆದರೆ, ಈ ಪೈಕಿ ಶೇ. ೫೦ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಸಂಬಂಧವಿಲ್ಲದವರಾಗಿದ್ದು, ಹೊರ ಜಿಲ್ಲೆಗಳ ಮತ್ತು ಹೊರ ರಾಜ್ಯಗಳ ಮತದಾರರನ್ನು ಜಯನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದು ದಾಖಲೆಗಳಿಂದ ಬಹಿರಂಗವಾಗಿದೆ.
ಅದರಲ್ಲೂ ವಿಶೇಷವಾಗಿ ಬೆಂಗಳೂರಿನ ಹೊರ ಜಿಲ್ಲೆಗಳು ಮತ್ತು ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಹೊಸೂರು ಭಾಗಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತ ಮತದಾರರನ್ನು ಕೇವಲ ಪ್ರಸ್ತುತ ಸಾಲಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ದುರುದೇಶಪೂರ್ವಕವಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಆಪಾದಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ೩ ವಾರ್ಡ್ ಗಳಲ್ಲಿ ಕಾರ್ಯ ನಿರ್ವಾಹಿಸುತ್ತೀರುವ ಕಂದಾಯ ವಸೂಲಿಗಾರರು, ಕಂದಾಯ ಪರಿವೀಕ್ಷಕರು, ಗಣಕಯಂತ್ರ ನಿಯಂತ್ರಕರು ಮತ್ತು ಜಯನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಜಯನಗರ ವಿಭಾಗದ ಕಂದಾಯ ಅಧಿಕಾರಿಗಳು ಈ ಕಾನೂನು ಬಾಹಿರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದರು.
ಅದರಲ್ಲೂ ರಾಷ್ಟ್ರೀಯ ಪಕ್ಷವೊಂದರ ಸ್ಥಳೀಯ ನಾಯಕರುಗಳಿಂದ ಪ್ರತೀ ನಕಲಿ ಮತದಾರರ ಸೇರ್ಪಡೆಗೆ ಇಂತಿಷ್ಟು ಹಣವೆಂಬಂತೆ ಲಕ್ಷಾಂತರ ರೂಪಾಯಿಗಳಷ್ಟು ಹಣವನ್ನು ಪಡೆದು ಇಂತಹ ಪ್ರಜಾಪ್ರಭುತ್ವ ವಿರೋಧಿ ಮತ್ತು ಕಾನೂನು ಬಾಹಿರ ಕಾರ್ಯದಲ್ಲಿ ಈ ಎಲ್ಲಾ ಅಧಿಕಾರಿಗಳು ತೊಡಗಿದ್ದಾರೆ.
ಹೀಗಾಗಿ, ಮತದಾರರ ಪಟ್ಟಿಯಲ್ಲಿರುವ ಎಲ್ಲಾ ೯,೧೫೩ ಮತದಾರರ ಪರಿಶೀಲನೆ ಕಾರ್ಯವನ್ನು ಸ್ಥಳೀಯ ಅಧಿಕಾರಿಗಳನ್ನು ಹೊರತುಪಡಿಸಿ ಪ್ರಾಮಾಣಿಕ ಅಧಿಕಾರಿಗಳಿಂದ ನಡೆಸಿ, ಸ್ಥಳೀಯರಲ್ಲದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಹಾಗೂ ಈ ಕಾನೂನು ಬಾಹಿರ ಕಾರ್ಯದಲ್ಲಿ ಭಾಗಿಗಳಾಗಿರುವ ಎಲ್ಲ ಅಧಿಕಾರಿ, ನೌಕರರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.