ಕಲಬುರಗಿ,ಜು.20: ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ-2024 ಅಂಗವಾಗಿ ಜುಲೈ 21 ರಿಂದ ಆಗಸ್ಟ್ 21ರ ವರೆಗೆ ಕಲಬುರಗಿ ಜಿಲ್ಲೆಯಾದ್ಯಂತ ಬಿ.ಎಲ್.ಓ.ಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಿದದು, ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹಸೆರು ಸೇರಿಸುವಂತೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.
ಗುರುವಾರ ತಮ್ಮ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಶುದ್ದ ಮತ್ತು ದೋಷರಹಿತ ಮತದಾರರ ಪಟ್ಟಿ ಪರಿಷ್ಕರಣೆಗೆ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ರಾಜಕೀಯ ಪಕ್ಷಗಳ ಮುಖಂಡರಲ್ಲಿ ಮನವಿ ಮಾಡಿದ ಅವರು, ಬ್ಲಾಕ್ ಲೇವೆಲ್ ಏಜೆಂಟ್‍ಗಳ ಮಾಹಿತಿಯನ್ನು ಕೂಡಲೆ ಸಲ್ಲಿಸಬೇಕೆಂದು ತಿಳಿಸಿದರು.
ಮತದಾರ ಪಟ್ಟಿ ಪರಿಷ್ಕರಣೆ ಭಾಗವಾಗಿ ಮತಗಟ್ಟೆ ಅಧಿಕಾರಿಗಳಿಗೆ ಈಗಾಗಲೆ ತರಬೇತಿ ನೀಡಿದ್ದು, ಜುಲೈ 21 ರಿಂದ ಆಗಸ್ಟ್ 21ರ ವರೆಗೆ ಬಿ.ಎಲ್.ಓ. ಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಅರ್ಜಿಗಳನ್ನು ಸಾರ್ವಜನಿಕರಿಂದ ಪಡೆದು ಮೋಬೈಲ್ ತಂತ್ರಾಂಶದ ಮೂಲಕ ಸ್ಥಳದಲ್ಲಿಯೇ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೆ ನಿಧನ, ಡಬಲ್ ಎಂಟ್ರಿ ಪ್ರಕರಣಗಳು ಕಂಡುಬಂದಲ್ಲಿ ಅಂತವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ. ಸಾರ್ವಜನಿಕರು ಅಗತ್ಯ ದಾಖಲೆಗಳು ನೀಡಿ ಸಹಕರಿಸಬೇಕು ಎಂದರು.
ಈ ಹಿಂದೆ ಜನವರಿ-1ಕ್ಕೆ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಮತದಾರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿತ್ತು. ಇತ್ತೀಚೆಗೆ ಬಾರತ ಚುನಾವಣಾ ಆಯೋಗ ಪ್ರಜಾ ಪ್ರತಿನಿಧಿ ಕಾಯ್ದೆ-1950ರ ಸೆಕ್ಷನ್ 14ಕ್ಕೆ ತಿದ್ದುಪಡಿ ತಂದು ಪ್ರತಿ ವರ್ಷ ಜನವರಿ-1, ಏಪ್ರಿಲ್-1, ಜುಲೈ-1 ಹಾಗೂ ಅಕ್ಟೋಬರ್-1ಕ್ಕೆ ಅರ್ಹತಾ ದಿನಾಂಕವನ್ನಾಗಿ ಪರಿಗಣಿಸಿ ಪರಿಷ್ಕರಣೆ ಮಾಡಲಾಗುತ್ತಿದ್ದು, ವಿಶೇಷವಾಗಿ ಯುವ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿ:
ಇದೇ ಜುಲೈ 21 ರಿಂದ ಆಗಸ್ಟ್ 21ರ ವರೆಗೆ ಬಿ.ಎಲ್.ಓ.ಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಿದ್ದಾರೆ. ಆಗಸ್ಟ್ 22 ರಿಂದ ಸೆಪ್ಟೆಂಬರ್ 29ರ ವರೆಗೆ ಮತದಾನ ಕೇಂದ್ರಗಳ ರೇಷನಲೈಲೇಷನ್ ಕಾರ್ಯ ನಡೆಯಲಿದೆ. ಅಕ್ಟೋಬರ್ 17ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ನವೆಂಬರ್ 30ರ ವರೆಗೆ ಸಾರ್ವಜನಿಕರಿಂದ ಅಕ್ಷೇಪಣೆ ಆಹ್ವಾನಿಸಲಾಗುವುದು. ಸಲ್ಲಿಕೆಯಾದ ಅಕ್ಷೇಪಣೆಗಳನ್ನು ಡಿಸೆಂಬರ್ 26ರ ವರೆಗೆ ವಿಲೇವಾರಿಗೊಳಿಸಿ ಅಂತಿಮವಾಗಿ 2024ರ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾ ತಹಶೀಲ್ದಾರ ಪಂಪಯ್ಯ ಹಾಗೂ ವಿವಿಧ ರಾಜಕೀಯ ಪಕ್ಷಗಳು ಮುಖಂಡರು ಭಾಗವಹಿಸಿದ್ದರು.