ಕಲಬುರಗಿ,ಅ.26: ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕಳೆದ ಸೆಪ್ಟೆಂಬರ್ 30 ರಿಂದಲೇ ಪ್ರಾರಂಭವಾಗಿದ್ದು, ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾದರೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಗತ್ಯವಾಗಿದೆ. ಅಂತಿಮ ದಿನಾಂಕದ ವರೆಗೆ ಕಾಯದೆ ಅರ್ಹರು ಕೂಡಲೆ ಹೆಸರು ನೊಂದಾಯಿಸಿಕೊಳ್ಳಬೇಕೆಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುವ ಭವನೇಶ ಪಾಟೀಲ ದೇವಿದಾಸ್ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಆರಂಭವಾಗಿ 25 ದಿನಗಳಾದರು ನಿರೀಕ್ಷಿತ ಪ್ರಮಾಣದಲ್ಲಿ ಮತದಾರರು ಹೆಸರು ನೊಂದಾಯಿಸಿಕೊಳ್ಳದಿರುವುದು ಗಮನಿಸಲಾಗಿದೆ. ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದಿರುವ ಅವರು, ಹೆಸರು ಸೇರ್ಪಡೆಗೆ 2023ರ ನವೆಂಬರ್ 6 ಕೊನೆ ದಿನವಾಗಿದೆ ಎಂದು ತಿಳಿಸಿದ್ದಾರೆ.
ದಿ.01.11.2020 ಕ್ಕಿಂತಲೂ ಮೊದಲು ಪದವಿ ಪಡೆದಿರುವಂತಹ ಪದವೀಧರರ ಮತದಾರರು ನಿಗದಿಪಡಿಸಿದ ನಮೂನೆ-18 ಭರ್ತಿ ಮಾಡಿದ ಅದರೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂತಿಮ ವರ್ಷದ ಅಂಕಪಟ್ಟಿ ಅಥವಾ ಕನ್ವೋಕೇಷನ್ ಪ್ರಮಾಣ ಪತ್ರ, ಸ್ಥಳೀಯ ನಿವಾಸಿಯಾಗಿರುವ ಕುರಿತು ಚುನಾವಣೆ ಗುರುತಿನ ಚೀಟಿ ಅಥವಾ ವಾಸಸ್ಥಳ ಪ್ರಮಾಣ ಪತ್ರ ಅಥವಾ ಆಧಾರ್ ದಾಖಲೆಗಳನ್ನು ಸ್ವಯಂ ಧೃಡೀಕರಿಸಿದಲ್ಲದೇ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ನಿಗಧಿತ ದಿನಾಂಕದೊಳಗೆ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಕೌಂಟರ್/ ಸಹಯವಾಣಿ ಕೇಂದ್ರದಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.