ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಏ.11 ಕೊನೆದಿನ


ಬಳ್ಳಾರಿ,ಏ.04: ‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು’ ಎಂಬ ನಾಣ್ಣುಡಿಯಂತೆ ಪ್ರಜಾಪ್ರಭುತ್ವದ ಭದ್ರಬುನಾದಿಗೆ ಮತದಾನ ಅತ್ಯಾವಶ್ಯಕವಾಗಿರುತ್ತದೆ. ಮತದಾನದ ಮೂಲಕ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು, ಜನಪ್ರಧಿನಿಧಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುವಂತೆ ಸೂಚಿಸಲು ಪ್ರಜೆಗಳಿಗೆ ಮತದಾನವೇ ಬ್ರಹ್ಮಾಸ್ತ್ರವೇ ಆಗಿರುತ್ತದೆ.
ಪ್ರಜಾಪ್ರಭುತ್ವದ ಬಲವರ್ಧನೆಗೆ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಯುವಜನರು ಪ್ರಜಾಪ್ರಭುತ್ವದ ಶಿಲ್ಪಿಗಳಾಗುತ್ತಾರೆ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವಲ್ಲಿ ಕನಸು ಕಟ್ಟಿ ಅದರ ಹಿಂದೆ ಬೆನ್ನಟ್ಟುವ ಯುವಜನರಿಗೆ ಪ್ರಜಾಪ್ರಭುತ್ವವು ಬೆಂಬಲವಾಗಬೇಕಾದರೆ ಪ್ರತಿಯೊಬ್ಬರು ಮತದಾನ ಮಾಡಬೇಕಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳಾಗಲು ಇಂದೇ ಮತದಾರರ ಪಟ್ಟಿಯಲ್ಲಿ ನೊಂದಣಿಯಾಗುವುದು ಅತ್ಯಾವಶ್ಯಕವಾಗಿರುತ್ತದೆ.
18 ವರ್ಷ ಮೇಲ್ಪಟ್ಟವರು ಮತದಾರರಾಗಲು ಅರ್ಹರು: ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಭಾರತೀಯ ಪ್ರಜೆ 18 ವರ್ಷ ದಾಟಿದರೆ ಮತದಾನ ಮಾಡಲು ಅರ್ಹ. 2004ರಲ್ಲಿ ಜನಿಸಿದ ಪ್ರತಿಯೊಬ್ಬರೂ 2023ರ ಏಪ್ರಿಲ್ 1 ಕ್ಕೆ 18 ವರ್ಷ ಪೂರ್ಣಗೊಳಿಸಿದವರೂ, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ.
ಆನ್‍ಲೈನ್/ ಆಫ್‍ಲೈನ್ ನೋಂದಣಿಗೂ ಅವಕಾಶ: 18 ವರ್ಷ ಪೂರ್ಣಗೊಳಿಸಿದವರು ಮತದಾರರ ಪಟ್ಟಿಯಲ್ಲಿ ತಮ್ಮ  ಹೆಸರನ್ನು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, www.nvsp.in , www.voterportal.eci.gov.in ಅಥವಾ ವೋಟರ್ ಹೆಲ್ಪ್‍ಲೈನ್ ಆ್ಯಪ್ ಮೂಲಕ ಆನ್‍ಲೈನ್ ನೋಂದಣಿ ಕೈಗೊಳ್ಳಬಹುದು.
  ಯುವಜನರು ತಮ್ಮ ಬೂತ್ ಮಟ್ಟದ ಅಧಿಕಾರಿ ಅಥವಾ ಮತದಾರರ ಸಹಾಯ ಕೇಂದ್ರವನ್ನು ಸಹ ಸಂಪರ್ಕಿಸಬಹುದಾಗಿದೆ. ಇಲ್ಲವಾದಲ್ಲಿ ಸಹಾಯವಾಣಿ 1950 ಸಂಖ್ಯೆಗೆ ಸಂಪರ್ಕಿಸಬಹುದು.
ಏ.11 ಕೊನೆದಿನ: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಏ.11ರ ಮಂಗಳವಾರ ಕೊನೆದಿನವಾಗಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಚುನಾವಣಾ ಗುರುತಿನ ಚೀಟಿ ಪಡೆದು ಸಧೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.