ಮತದಾರರ ಪಟ್ಟಿಯಲ್ಲಿ ಆಧಾರ್ ನಮೂದು ಪರೀಕ್ಷಿಸಿಕೊಳ್ಳಿ-ಜಿಲ್ಲಾಧಿಕಾರಿ


ದಾವಣಗೆರೆ ; ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಎಲ್ಲಾ ಮತದಾರರು ಸ್ವಯಂ ಪ್ರೇರಿತರಾಗಿ ತಮ್ಮ ಆಧಾರ್ ಸಂಖ್ಯೆಯನ್ನು ನೀಡಿ, ಮತದಾರರ ಪಟ್ಟಿಯಲ್ಲಿ ನಮೂದಿಸಿರುವುದನ್ನು ದೃಢೀಕರಿಸಿಕೊಳ್ಳಲು ಮುಂದಾಗಬೇಕು. ಈ ಪ್ರಕ್ರಿಯೆ ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯಲ್ಲಿ ಮತದಾರರ ದೃಢೀಕರಣ, ಆಧಾರ್ ಜೋಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಏರ್ಪಡಿಸಲಾದ ರಾಜಕೀಯ ಪಕ್ಷಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಪ್ರಕಾರ ಮತದಾರರ ನೋಂದಣಿಯ ನಮೂನೆಗಳಲ್ಲಿ ಪ್ರಸ್ತುತ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಲ್ಲಿ ನಮೂನೆ 6-ಬಿ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನಮೂದುಗಳನ್ನು ದೃಢೀಕರಿಸಲು ಸಂಬಂಧಪಟ್ಟ ಮತದಾರರಿಂದ ಆಧಾರ್ ಸಂಖ್ಯೆ ಪಡೆಯಲು ಈ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕವೂ ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದ್ದು. ಆಫ್‍ಲೈನ್ ನಮೂನೆ 6-ಬಿ ಯನ್ನು ಸಂಬಂಧಪಟ್ಟ ಮತದಾರರ ನೋಂದಾಣಾಧಿಕಾರಿ, ತಹಶೀಲ್ದಾರರ ಕಛೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಂದ ಪಡೆದು ಸಲ್ಲಿಸಬಹುದು. ಆನ್‍ಲೈನ್ ಮೂಲಕವೂ ಅವಕಾಶವಿದ್ದು, ಮತದಾರರು ಆಧಾರ್ ಸಂಖ್ಯೆಯನ್ನು ಎನ್‍ವಿಎಸ್‍ಪಿ ನ್ಯಾಷನಲ್ ವೋಟರ್ಸ ಸರ್ವಿಸ, ವಿಹೆಚ್‍ಎ ವೋಟರ್ ಹೆಲ್ಪ್‍ಲೈನ್ ಆ್ಯಪ್ ಹಾಗೂ ಗರುಡ ಆ್ಯಪ್‍ಗಳ ಮೂಲಕ ಅಥವಾ ವೋಟರ್ ಪೋರ್ಟಲ್  ಮುಖಾಂತರ ಮೊಬೈಲ್ ಮೂಲಕವೇ ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸಬಹುದು.ಜಿಲ್ಲೆಯಲ್ಲಿ ಸದ್ಯ 1692 ಮತಗಟ್ಟೆಗಳಿದ್ದು ಪುರುಷರು 7,04,685 ಮಹಿಳೆಯರು 6,98,986 ಇತರೆ 122 ಸೇರಿದಂತೆ ಒಟ್ಟು 14,03,793 ಲಕ್ಷ ಮತದಾರರಿದ್ದಾರೆ. ಆಧಾರ್ ಸಂಖ್ಯೆ ನೀಡಿ ಮತದಾರರ ಪಟ್ಟಿ ದೃಢೀಕರಣ ಪ್ರಕ್ರಿಯೆ ಆಗಸ್ಟ್ 04 ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ಜಾರಿಯಲ್ಲಿರುತ್ತದೆ. ಮತದಾರರ ನೊಂದಣಿಗೆ ಜನವರಿ 01, ಏಪ್ರಿಲ್ 01, ಜುಲೈ 01 ಹಾಗೂ  ಅಕ್ಟೋಬರ್ 01  ರÀಂತೆ ಒಟ್ಟು ನಾಲ್ಕು ಅರ್ಹತಾ ದಿನಾಂಕಗಳನ್ನು ನಿಗದಿಪಡಿಸಿದ್ದು, ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ನಮೂನೆ 07 ರಲ್ಲಿ ಹೆಸರು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ನಮೂನೆ 08 ರಲ್ಲಿ ಮತದಾರರ ನಿವಾಸ ಬದಲಾವಣೆ, ವಿವಿಧ ತಿದ್ದುಪಡಿಗಳು, ಮತದಾರರ ಗುರುತಿನ ಚೀಟಿ ಬದಲಾವಣೆ ಹಾಗೂ ವಿಕಲಚೇತನ ವ್ಯಕ್ತಿ ಗುರುತಿಸುವುದಕ್ಕಾಗಿ ಬಳಸಲಾಗುವುದು.
 ಚುನಾವಣಾ ಕ್ಷೇತ್ರದೊಳಗೆ ಒಂದು ಭಾಗ ಸಂಖ್ಯೆಯಿಂದ ಮತ್ತೋಂದು ಭಾಗಸಂಖ್ಯೆಗೆ ವರ್ಗಾವಣೆ ಹೊಂದಲು ಹಾಗೂ ಒಂದು ಕ್ಷೇತ್ರದಿಂದ ಮತ್ತೋಂದು ಕ್ಷೇತ್ರಕ್ಕೆ ಬದಲಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳ ರ್ಯಾಷಲೈಜೇಷನ್ ಅಥವಾ ಮರು ವ್ಯವಸ್ಥೆ ಕಾರ್ಯ ಆಗಸ್ಟ್ 04 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದ್ದು, ಮತದಾರರ ಕರಡು ಪಟ್ಟಿ ನವೆಂಬರ್ 09 ರಂದು ಪ್ರಕಟವಾಗಲಿದೆ. ಆಗಸ್ಟ್ 08 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿಸೆಂಬರ್ 26 ರ ಒಳಗೆ ವಿಲೇವಾರಿ ಮಾಡಲಾಗುವುದು, ಮತದಾರರ ಅಂತಿಮ ಪಟ್ಟಿ 2023 ರ ಜನವರಿ 05 ಕ್ಕೆ ಪ್ರಕಟಗೊಳ್ಳಲಿದೆ ಎಂದು ಹೇಳಿದರು.