ಮತದಾರರ ಪಟ್ಟಿಯಲ್ಲಿನ ನಕಲಿ ಮತದಾರರ ಹೆಸರನ್ನು ತೆಗೆದುಹಾಕಲು ಸೂಚನೆ


ಸಂಜೆವಾಣಿ ವಾರ್ತೆ :
ಕೂಡ್ಲಿಗಿ.ನ. 16 : – ನಕಲಿ ಮತದಾರರ ಹೆಸರು ಇರುವುದನ್ನು ಪತ್ತೆಹಚ್ಚಿ ಅಂಥವುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಟಿ ವೆಂಕಟೇಶ ಸೂಚನೆ ನೀಡಿದರು
ಅವರು ಪಟ್ಟಣದ ಮಿನಿ ವಿಧಾನಸೌಧ ನೂತನ ಕಟ್ಟಡದ ತಹಸೀಲ್ದಾರ್ ಕಚೇರಿಗೆ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಮಂಗಳವಾರ ಮೊದಲ ಬಾರಿಗೆ ಭೇಟಿ ನೀಡಿ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡುತ್ತ ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ ಮತ್ತು ತೆಗೆದು ಹಾಕುವುದಕ್ಕೆ ಸಂಬಂಧಿಸಿ ತಾಲೂಕಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಚುನಾವಣಾ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ, ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈತಪ್ಪಿ ಹೋಗದಂತೆ ಜಾಗ್ರತೆವಹಿಸಬೇಕು ಎಂದರು.
ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳು, ಪ್ರಥಮ ಹಾಗೂ ದ್ವಿತೀಯ ದರ್ಜೆ ಸಹಾಯಕರು ಸೇರಿ ಇತರರಿಗೆ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿಯ ತಿಳಿವಳಿಕೆ ಇರಬೇಕು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವ  ನೌಕರರು ಫೌಂಡೇಷನ್ ಕೋರ್ಸ್ ಕಡ್ಡಾಯವಾಗಿ ಪಡೆಯಬೇಕು. ತರಬೇತಿ ಪಡೆಯದ ಎಲ್ಲಾ ತಾಲೂಕುಗಳ ಕಂದಾಯ ಇಲಾಖೆಯ ನೌಕರರಿಗೆ ತರಬೇತಿ ಶಿಬಿರವನ್ನು ಒಂದು ತಿಂಗಳಕಾಲ ಆಯೋಜಿಸಲಾಗುವುದು. ಆ ತರಬೇತಿ ಶಿಬಿರಕ್ಕೆ ತಾಲೂಕಿನಲ್ಲಿ ತಲಾ ನಾಲ್ಕೈದು  ನೌಕರರನ್ನು ಹಂತ ಹಂತವಾಗಿ ಕಡ್ಡಾಯವಾಗಿ ಕಳುಹಿಸಿಕೊಡಬೇಕು ಎಂದು ತಹಸೀಲ್ದಾರ್ ಟಿ.ಜಗದೀಶ್ ಅವರಿಗೆ ಸೂಚಿಸಿದರು.
ತಾಲೂಕಿನಲ್ಲಿರುವ ಪೆಟ್ರೋಲ್ ಬಂಕ್ ಗಳಲ್ಲಿ ತಿಂಗಳಿಗೆ ಒಮ್ಮೆಯಾದರೂ ಪರಿಶೀಲನೆ ನಡೆಸಬೇಕು. ಪೆಟ್ರೋಲ್ ಮತ್ತು ಡೀಸೆಲ್ ಕಲಬೆರಕೆ ಸೇರಿ ರಸೀದಿಯಲ್ಲಿ ವ್ಯತ್ಯಾಸವಾಗುತ್ತಿದೆಯೇ ಎಂದು ಗಮನಿಸಬೇಕು ಎಂದು ತಹಸೀಲ್ದಾರ್ ಅವರಿಗೆ ತಿಳಿಸಿದರು.
ಭೂಮಾಪನಾ ಇಲಾಖೆ ಮತ್ತು ಆಹಾರ ಸರಬರಾಜು ಇಲಾಖೆ ಕಾರ್ಯ ಪ್ರಗತಿಯ ಕುರಿತು ಹಾಗೂ 190 ದಿನದೊಳಗೆ ನ್ಯಾಯಾಲಯಕ್ಕೆ ಸಂಬಂಧಿಸಿದ 46 ಪ್ರಕರಣಗಳಿರುವ ಕುರಿತು ಜಿಲ್ಲಾಧಿಕಾರಿ ಟಿ.ವೆಂಕಟೇಶ್  ಅವರಿಗೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಭೂಮಿ ವಿಭಾಗದಲ್ಲಿ ಪಹಣಿ ಅಪ್ ಡೇಟ್ ಆಗುತ್ತಿಲ್ಲ ಎಂದು ಭೂಮಿ ಕೇಂದ್ರಕ್ಕೆ ಸಂಬಂದಿಸಿದ ಸಿಬ್ಬಂದಿ  ಚೈತ್ರಾ ಹೇಳಿದರು. ಆ ತಕ್ಷಣವೇ ಸಂಬಂಧಿಸಿದವರಿಗೆ ಫೋನ್ ಕರೆ ಮೂಲಕ ಜಿಲ್ಲಾಧಿಕಾರಿ ವಿಷಯ ತಿಳಿಸಿ, ತಕ್ಷಣವೇ ಸರಿಪಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಟಿ.ಜಗದೀಶ್, ಭೂಮಾಪನಾ ಇಲಾಖೆ ಎಡಿಎಲ್ ಆರ್ ಬಸವರಾಜ, ಆಹಾರ ಇಲಾಖೆ ಶಿರಸ್ತೇದಾರ್ ಭರತ್, ಶಿರಸ್ತೇದಾರರಾದ ಚಂದ್ರಶೇಖರ, ಕುಮಾರಸ್ವಾಮಿ, ಮಹಮ್ಮದ್ ಗೌಸ್ ಸೇರಿ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.