ಮತದಾರರ ನೊಂದಣಿಯಲ್ಲಿ ರಾಜಕೀಯ ಪಕ್ಷಗಳ ಪಾತ್ರ ಅಗತ್ಯ: ಅಪರ ಜಿಲ್ಲಾಧಿಕಾರಿ


ಬಳ್ಳಾರಿ,ಅ.07: ಮುಂಬರುವ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024ರ ಸಂಬಂಧ ಮತದಾರರ ಪಟ್ಟಿ ಸಿದ್ಧಪಡಿಸುವಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಅರ್ಹ ಪದವೀಧದರು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರಾ ಅವರು ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಮನವಿ ಮಾಡಿದರು.
ಅವರು, ಶುಕ್ರವಾರದಂದು ತಮ್ಮ ಕಚೇರಿಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ 2024 ನಿಮಿತ್ತ ನಮೂನೆ-18 ಸೇರ್ಪಡೆ ಕುರಿತಂತೆ ಜಿಲ್ಲೆಯ ಎಲ್ಲಾ ರಾಷ್ಟ್ರೀಯ, ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿ ನಮೂನೆ-18 ಸಲ್ಲಿಸಲು ಭಾರತ ಚುನಾವಣಾ ಆಯೋಗವು ಹೊರಡಿಸಿದ ಆದೇಶದನ್ವಯ ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರು ನೊಂದಣಿ ಮಾಡಿಕೊಳ್ಳಲು ರಾಜಕೀಯ ಪ್ರತಿನಿಧಿಗಳು ಪ್ರಚಾರ ನೀಡಬೇಕು ಎಂದರು.
ಅರ್ಜಿ ನಮೂನೆ-18 ರಲ್ಲಿ ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನ ನ.06, ಕರಡು ಮತದಾರರ ಪಟ್ಟಿ ಪ್ರಕಟಿಸುವ ದಿನ ನ.23, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ನ.23ರಿಂದ ಡಿ.09ರವರೆಗೆ ಕಾಲಾವಕಾಶ ನಿಗದಿಪಡಿಸಿದೆ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನ ಡಿ.12 ಆಗಿದೆ ಎಂದು ಹೇಳಿದರು.
ಕರ್ನಾಟಕ ಈಶಾನ್ಯ ಪದವೀಧರರ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು 2023ರ ನ.01ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 2020ರ ನ.01ಕ್ಕಿಂತ ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಧರರಾಗಿರಬೇಕು. ಪದವಿ ಪಡೆದಿರುವಂತಹ ಪದವೀಧರರು ನಿಗದಿಪಡಿಸಿದ ನಮೂನೆ-18 ರಲ್ಲಿ (ಭಾವ ಚಿತ್ರದೊಂದಿಗೆ) ಭರ್ತಿಮಾಡಿದ ಅರ್ಜಿಯೊಂದಿಗೆ ಕಡ್ಡಾಯವಾಗಿ ತಾವು ಉತ್ತೀರ್ಣರಾಗಿರುವ ಅಂಕಪಟ್ಟಿ, ಆಧಾರ ಕಾರ್ಡ್, ಚುನಾವಣಾ ಗುರುತಿನ ಚೀಟಿ ಹಾಗೂ ತಾವು ವಾಸಿಸುತ್ತಿರುವ ವಾಸ್ಥಳದ ದಾಖಲೆಗಳನ್ನು ಸ್ವಯಂಧೃಡೀಕರಿಸಿ ನ.06ರೊಳಗಾಗಿ ಮತದಾರರ ನೊಂದಣಾಧಿಕಾರಿಗಳು/ಸಹಾಯಕ ಮತದಾರರ ನೋಂದಣಾಧಿಕಾರಿಗಳು/ಸಂಬಂಧಪಟ್ಟ ವಿಧಾನಸಭಾ ಮತಕೇತ್ರದ ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಶೀಲ್ದಾರರ ಕಾರ್ಯಾಲಯದಲ್ಲಿ) ಸಲ್ಲಿಸಬೇಕು ಎಂದು ತಿಳಿಸಿದರು.
ವಕೀಲರು, ವೈದ್ಯರು, ಚಾರ್ಟರ್ಡ್ ಅಕೌಂಟೆಂಟರು ಹಾಗೂ ನೊಂದಾಯಿತ ಇಂಜಿನಿಯರ್ ಸಂಘದ ಸದಸ್ಯರು ದೃಢೀಕರಿಸಿದ ಪಟ್ಟಿಯೊಡನೆ ಅರ್ಜಿಯನ್ನು ಒಟ್ಟಾಗಿ ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಬಹುದು. ಪ್ರಮಾಣ ಪತ್ರದೊಡನೆ ಅರ್ಜಿದಾರನು ತಾನು ಓದಿದ ಕಾಲೇಜಿನ ಪ್ರಾಂಶುಪಾಲರು ಅಥವಾ ಸಂಬಂಧಪಟ್ಟ ವಿಶ್ವವಿದ್ಯಾಲಯದ ರಿಜಿಸ್ಟ್ರಾರಗಳಿಂದ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ನಮೂನೆ-18 ನ್ನು ಅರ್ಹ ಮತದಾರರು ಉಚಿತವಾಗಿ ಸಂಬಂಧಪಟ್ಟ ಕಚೇರಿಯಿಂದ ಪಡೆಯಬಹುದು. ಅರ್ಹ ಪದವೀಧರರು ಸಂಬಂಧಪಟ್ಟ ಅಧಿಕಾರಿಗಳಿಗೆ ಚುನಾವಣಾ ಗುರುತಿನ ಚೀಟಿಯ ಎಪಿಕ್ ನಂಬರ್ ಮಾಹಿತಿ ಒದಗಿಸಬೇಕು ಎಂದರು.
ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಿದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುತ್ತಾರೆ. ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗವು ಮುಂಬರುವ ದಿನಗಳಲ್ಲಿ ನಮೂನೆ-18 ರ ಅರ್ಜಿಗಳನ್ನು ಇಆರ್‍ಎಂಎಸ್ (ERMS)) ನಲ್ಲಿ ಅಳವಡಿಸಲು ಉದ್ದೇಶಿಸಿದೆ. ಅರ್ಹ ಪದವೀಧರರು ಹೆಚ್ಚಿನ ಆಸಕ್ತಿ ವಹಿಸಿ ಈ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು, ಸುಭದ್ರ ಹಾಗೂ ಪ್ರಜಾಪ್ರಭುತ್ರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಉಪಸ್ಥಿತರಿದ್ದರು.