
ಇಂಡಿ:ಮೇ.17:ಮತದಾರರ ತೀರ್ಪನ್ನು ನಾವು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇವೆ. ಕಾರ್ಯಕರ್ತರು ಯಾರೂ ಎದೆಗುಂದಬಾರದು ನಿಮ್ಮೊಂದಿಗೆ ಸದಾ ಮುಖಂಡರು ಇದ್ದೇವೆ ಎಂದು ಬಿಜೆಪಿ ಪರಾಭವ ಅಭ್ಯರ್ಥಿ ಕಾಸುಗೌಡ ಬಿರಾದಾರ್ ಹೇಳಿದರು.
ಅಗರಖೇಡ ರಸ್ತೆಯ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಯಕರ್ತರ ಶ್ರಮದಿಂದ 40,000 ಮತಗಳು ಪಕ್ಷಕ್ಕೆ ಬಂದಿವೆ. ಅಲ್ಲದೆ ಬಿಜೆಪಿ ಅಭ್ಯರ್ಥಿ ಗೆಲ್ಲಲ್ಲ ಎಂಬ ಅಪಪ್ರಚಾರ ಮಾಡಿ ಕುತಂತ್ರ ಮಾಡಿದರು ಎಂದು ಆರೋಪಿಸಿದರು.
ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದೀರಿ, ನಿಮ್ಮ ಯಾವುದೇ ಕೆಲಸ ಕಾರ್ಯಗಳಿದ್ದರೂ ನಮ್ಮನ್ನು ಹಾಗೂ ಪಕ್ಷದ ಮುಖಂಡರನ್ನು ಭೇಟಿಯಾಗಿ ಸದಾ ನಾವು ನಿಮ್ಮ ಸೇವೆಗೆ ಸಿದ್ಧರಿದ್ದೇವೆ. ಸೋಲು ಗೆಲುವು ಸರ್ವೇಸಾಮಾನ್ಯ ಎಂದ ಅವರು ಇನ್ನೆರಡು ದಿನದಲ್ಲಿ ಕಾರ್ಯಕರ್ತರ ಆತ್ಮಾವಲೋಕನ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಹಣಮಂತರಾಯಗೌಡ ಪಾಟೀಲ, ದೇವೇಂದ್ರ ಕುಂಬಾರ, ರಾಜಕುಮಾರ ಸಗಾಯಿ, ರವಿ ವಗ್ಗೆ ಮತ್ತಿತರಿದ್ದರು.