ಮತದಾರರ ಜಾಗೃತಿಗೆ ಮೇಣದಬತ್ತಿ ಮೆರವಣಿಗೆ:ವಿಕಲಚೇತನರು ಮತ್ತು ತೃತೀಯ ಲಿಂಗಿಗಳು ಸಕ್ರೀಯವಾಗಿ ಭಾಗಿ

ಕಲಬುರಗಿ,ಏ.01: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಶನಿವಾರ ಕಲಬುರಗಿ ನಗರದಲ್ಲಿ ಸಂಜೆ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಜರುಗಿದ ಕ್ಯಾಂಡಲ್ ಮಾರ್ಚ್‍ನಲ್ಲಿ ವಿಕಲಚೇತನರು ಮತು ತೃತೀಯ ಲಿಂಗಿಗಳು ಸಕ್ರೀಯವಾಗಿ ಭಾಗವಹಿಸುವ ಮೂಲಕ ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಿದರು.
ಕೆಲ ವಿಕಲಚೇತನರು (ಚಲನ) ಒಂದು ಕೈಯಲ್ಲಿ ನೆರವಿಗೆ ಊರುಗೋಲು ಇಟ್ಟುಕೊಂಡು ಇನ್ನೊಂದು ಕೈಯಲ್ಲಿ ಕ್ಯಾಂಡಲ್ ಹಿಡಿದು ಪ್ರಜಾಪ್ರಭುತ್ವ ಸದೃಢಕ್ಕೆ ಮತ ಚಲಾಯಿಸುವಂತೆ ಕರೆ ನೀಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ತಮ್ಮ ತ್ರಿಚಕ್ರದೊಂದಿಗೆ ಮೆರವಣಿಗೆಯಲ್ಲಿ ಭಾಗಿಯಾದರು. ಇನ್ನು ತೃತೀಯ ಲಿಂಗಿಗಳು ಉತ್ಸಾಹದಿಂದ ಭಾಗವಹಿಸಿದರು. ಮೆರವಣಿಗೆಯುದ್ದಕ್ಕೂ “ನಮ್ಮ ಮತ ನಮ್ಮ ಶಕ್ತಿ, “ಮತದಾನ ಮಾಡಲು ನಿರ್ಲಕ್ಷ್ಯವೇಕೆ”, ನಾಗರಿಕರ ಒಂದೇ ಕರೆ-ಅದು ಮತದಾನದ ಕರೆ”, “ಮತದಾನ ಪ್ರತಿಯೊಬ್ಬರ ಹಕ್ಕು”, “ನಾನು ಮತದಾರ ನನಗೆ ಹೆಮ್ಮೆ” ಎಂಬಿತ್ಯಾದಿ ಭಿತ್ತಿಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಾ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಎಸ್.ವಿ.ಪಿ. ವೃತ್ತದಿಂದ ಆರಂಭಗೊಂಡ ಮೆರವಣಿಗೆ ಡಿ.ಸಿ. ಕಚೇರಿ ವರೆಗೆ ಸಾಗಿ ಸಂಪನ್ನಗೊಂಡಿತ್ತು. ಅಲ್ಲಿ ಎಲ್ಲರು ಕೈಯಲ್ಲಿ ಕ್ಯಾಂಡಲ್ ಹಿಡಿದು ಗ್ರೂಪ್ ಫೋಟೋಗೆ ಪೋಸ್ ನೀಡಿದರು.
ಮತದಾನ ಪ್ರಮಾಣ ಶೇ.75 ಗುರಿ: ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಗಿರೀಶ್ ಡಿ. ಬದೋಲೆ ಮಾತನಾಡಿ, ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ.62 ಮಾತ್ರ ಇದ್ದು,. ಇದನ್ನು ಶೇ.75ಕ್ಕೆ ಏರಿಸಲು ಸ್ವೀಪ್ ಸಮಿತಿಯಿಂದ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಿದೆ. ಇದರಲ್ಲಿ ಮೇಣದಬತ್ತಿ ಮೆರವಣಿಗೆ ಸಹ ಒಂದಾಗಿದೆ. ಗುಲಬರ್ಗಾ ದಕ್ಷಿಣ-ಶೇ.52 ಮತ್ತು ಗುಲಬರ್ಗಾ ಉತ್ತರ ಶೇ.49 ಕಡಿಮೆ ಮತದಾನ ಪ್ರಮಾಣವಿದ್ದು, ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕಿದೆ. ಪ್ರತಿಯೊಬ್ಬರು ಬರುವ ಮೇ 10 ರಂದು ನಡೆಯುವ ಚುನಾವಣೆ ದಿನದಂದು ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮತ್ತು ಚಿತ್ತಾಪುರ ಮೀಸಲು ಕ್ಷೇತ್ರದ ಚುನಾವಣಾಧಿಕಾರಿ ನವೀನ್ ಯು., ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಅನುರಾಧಾ ಪಾಟೀಲ, ಸಿ.ಡಿ.ಪಿ.ಓ ಮಲ್ಲಣ್ಣ ದೇಸಾಯಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿಕಲಚೇತನರು ಮತ್ತು ತೃತೀಯ ಲಿಂಗಿಗಳು ಇದ್ದರು.