ಮತದಾರರ ಗುರುತಿನ ಚೀಟಿಗೆ ಆಧಾರ ಲಿಂಕ್ : ಭಾರೀ ಅಪರಾತಪರ ಬಹಿರಂಗ, ಮತದಾರರ ವಾರ್ಡ್ – ವಿಳಾಸ ಅದಲಿ, ಬದಲಿ

ಬಿಎಲ್‌ಓ ಮಟ್ಟದಲ್ಲಿ ಬೂತ್‌ವಾರು ಆಧಾರ್ ಲಿಂಕ್ ಪ್ರಕ್ರಿಯೆ : ಮತದಾರರ ಮೂಲ ವಿಳಾಸ ಬದಲಾವಣೆ ಆಕಸ್ಮಿಕವೇ?- ದುರುದ್ದೇಶವೇ?
ರಾಯಚೂರು.ನ.೧೯- ಮತದಾರರ ವೈಯಕ್ತಿಕ ಮಾಹಿತಿ ದತ್ತಾಂಶ ಕದಿಯುವ ಪ್ರಕರಣ ಒಂದೆಡೆ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದರೆ, ಮತ್ತೊಂದೆಡೆ ಜಿಲ್ಲೆಯಲ್ಲಿ ವಾಸಸ್ಥಳ ವಿಳಾಸ, ವಾರ್ಡ್ ಅದಲಿ, ಬದಲಿ ಲೋಪ, ಅನೇಕರು ಮತದಾರರನ್ನು ಭಾರೀ ಆತಂಕಕ್ಕೆ ಗುರಿ ಮಾಡಿದೆ.
ಕಳೆದ ಕೆಲ ತಿಂಗಳುಗಳ ಹಿಂದೆ ಚುನಾವಣಾ ಗುರುತಿನ ಚೀಟಿಗೆ ಆಧಾರ ಲಿಂಕ್ ಆಂದೋಲನಾ ಬಗ್ಗೆ ಆರಂಭದಿಂದಲೂ ಅನುಮಾನ ಹೊಂದಿದ ಮತದಾರರು, ರಾಜ್ಯದಲ್ಲಿ ಬಹಿರಂಗಗೊಂಡ ಚಿಲುಮೆ ಸಂಸ್ಥೆಯ ಮತದಾರರ ವೈಯಕ್ತಿಕ ಮಾಹಿತಿ ದತ್ತಾಂಶ ಕದಿಯುವ ಪ್ರಕರಣದ ಬೆನ್ನಲ್ಲೇ ಜಿಲ್ಲೆಯಲ್ಲಿ ಮತದಾರನ ಮೂಲ ವಿಳಾಸವನ್ನೇ ಅದಲಿ, ಬದಲಿ ಮಾಡಿದ ಘಟನೆಗಳು ಬೆಳಕಿಗೆ ಬಂದಿರುವುದು ಶಾಕ್ ಮೂಡಿಸಿದೆ. ಈ ಅಪರಾತಪರ ಸಾಮಾನ್ಯ ಮತದಾರರಿಗೆ ಮಾತ್ರವಲ್ಲದೇ, ಚುನಾವಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನೂ ಬಿಡದಿರುವುದು ಗಮನಾರ್ಹವಾಗಿದೆ.
ಭಾರತ ಚುನಾವಣಾ ಆಯೋಗದ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಎಲ್‌ಡಬ್ಲ್ಯೂವಿ ೩೩೫೩೮೦೨ ಎಂ.ಫೀರೋಜ್ ಇವರು ಮೂಲತಃ ವಾರ್ಡ್ ೧೪ ರ ಮಂಗಳವಾರ ಪೇಟೆ ನಿವಾಸಿಯಾಗಿದ್ದಾರೆ. ಕಳೆದೆ ಅನೇಕ ವರ್ಷಗಳಿಂದ ಅವರು ವಾರ್ಡ್ ೧೪ ರ ೪-೧೨-೧೯/೧ ಮಂಗಳವಾರ ಪೇಟೆ ಅಶೋಕ ರೋಡ್ ರಾಯಚೂರು ನಿವಾಸಿಯಾಗಿದ್ದಾರೆ. ಆದರೆ, ಚುನಾವಣಾ ಆಯೋಗದಿಂದ ನೀಡಲಾದ ಗುರುತಿನ ಚೀಟಿಯಲ್ಲಿ ವಿಳಾಸವನ್ನು ೧/೪/೮೮/೨೨೦ ಐ.ಬಿ.ರಸ್ತೆ ರಾಮಲಿಂಗೇಶ್ವರ ದೇವಸ್ಥಾನ ಎಂದು ವಾರ್ಡ್ ೦೩ ರ ಮತದಾರರನ್ನಾಗಿ ಅದಲಿ, ಬದಲಿ ಮಾಡಲಾಗಿದೆ.
ಚುನಾವಣಾ ಆಯೋಗದಿಂದ ನೀಡಿದ ಗುರುತಿನ ಚೀಟಿಯಲ್ಲಿ ಮನೆ ವಿಳಾಸಕ್ಕೆ ಸಂಬಂಧಿಸಿ ಎಂ.ಡಿ.ಫಿರೋಜ್ ಅವರನ್ನು ವಿಚಾರಿಸಿದಾಗ ಈ ಮನೆ ಯಾರದೂ, ಎಲ್ಲಿದೆ ಎನ್ನುವ ಮಾಹಿತಿಯೂ ಇಲ್ಲವೆಂದು ಹೇಳಿದರು. ಈ ಬಗ್ಗೆ ಚುನಾವಣಾ ವಿಭಾಗದಲ್ಲಿ ಹೆಚ್ಚಿನ ಮಾಹಿತಿ ಕೇಳಿದಾಗ ನಗರದ ಬಹುತೇಕ ಮತದಾರರ ವಿಳಾಸಗಳು ಬದಲಿಯಾಗಿರುವುದು ಬಹಿರಂಗಗೊಂಡಿತು. ಮತದಾರ ಇರುವ ಮನೆ ವಿಳಾಸ ಒಂದಾದರೇ, ಚುನಾವಣಾ ಆಯೋಗದಿಂದ ನೀಡಲಾದ ಕಾರ್ಡ್‌ನಲ್ಲಿ ಇರುವ ವಿಳಾಸ ಮತ್ತೊಂದಾಗಿದೆ.
ಈ ರೀತಿಯ ಅಪರಾತಪರಗಳಿಗೆ ಕಾರಣ ಏನು ಎನ್ನುವುದಕ್ಕೆ ಚುನಾವಣಾ ಇಲಾಖೆಯಲ್ಲಿ ಸ್ಪಷ್ಟ ಮಾಹಿತಿಯೇ ಇಲ್ಲ. ಬಿಎಲ್‌ಓ ಮಟ್ಟದಲ್ಲಿ ಆಧಾರ್ ಲಿಂಕ್ ಪ್ರಕ್ರಿಯೆ ನಿರ್ವಹಿಸಲಾಗಿದೆ. ಆಧಾರ್ ಮತ್ತು ಗುರುತಿನ ಚೀಟಿಯಲ್ಲಿ ಇರುವ ವಿಳಾಸ ಒಂದೇ ವಾರ್ಡ್ ಮತ್ತು ಬಡಾವಣೆಗೆ ಸಂಬಂಧಿಸಿದ್ದಾದರೂ ನೂತನ ಗುರುತಿನ ಚೀಟಿ ವಿಳಾಸ ಮತ್ತು ವಾರ್ಡ್ ಬದಲಾವಣೆ ಆಕಸ್ಮಿಕವೇ ಅಥವಾ ಕೆಲ ಮತಗಳನ್ನು ಗುರುತಿಸಿಕೊಂಡು ದುರುದ್ದೇಶಪೂರಕವಾಗಿ ಮಾಡಲಾಗಿದೆಯೇ?.
ವಿಳಾಸ ಮತ್ತು ವಾರ್ಡ್ ಬದಲಾವಣೆಯ ಅಪರಾತಪರ ಘಟನೆಯಿಂದ ಮತದಾರರಲ್ಲಿ ಭಾರೀ ಗೊಂದಲ ಮತ್ತು ಆತಂಕ ಮೂಡಲು ಮಾಡಿದೆ. ಚುನಾವಣಾ ಆಯೋಗದ ಗುರುತಿನ ಚೀಟಿ, ಆಧಾರ ಕಾರ್ಡ್ ಪ್ರಸ್ತುತ ಎಲ್ಲಾ ವ್ಯವಹಾರಗಳಿಗೆ ಅತ್ಯಂತ ಮುಖ್ಯವಾಗಿದೆ. ಇಂತಹ ಪ್ರಮುಖ ದಾಖಲೆಯಲ್ಲಿ ಈ ಅಪರಾತಪರ ಮತದಾರರು ತಮ್ಮ ಮೂಲ ಮತ್ತು ಖಾಯಂ ವಿಳಾಸವನ್ನು ಸಾಬೀತು ಪಡಿಸಲು ಪರದಾಡುವಂತಹ ಸ್ಥಿತಿ ಚುನಾವಣಾ ಆಯೋಗ ತಂದಿಟ್ಟಿದೆ.
ಚುನಾವಣಾ ಗುರುತಿನ ಚೀಟಿಗೆ ಆಧಾರ್ ಲಿಂಗ್ ಮಾಡುವ ಪ್ರಕ್ರಿಯೆ ಈಗಾಗಲೇ ಶೇ.೭೫ ರಷ್ಟು ಪೂರ್ಣಗೊಂಡಿದೆ. ಈ ಪ್ರಕ್ರಿಯೆ ಮುಂದುವರೆದಿದೆ. ಆದರೆ, ಚುನಾವಣಾ ಗುರುತಿನ ಚೀಟಿಗೆ ಆಧಾರ ಲಿಂಕ್ ಮಾಡುವ ಪ್ರಕ್ರಿಯೆ ಚುನಾವಣಾ ಹತ್ತಿರದಲ್ಲಿರುವಾಗ ಅಪರಾತಪರಗಳ ಬಹಿರಂಗ ಜನ ತೀವ್ರ ತಳಮಳಕ್ಕೆಡೆ ಮಾಡಿದೆ. ಈಗಾಗಲೇ ಹಳೆ ಗುರುತಿನ ಚೀಟಿಯಲ್ಲಿ ನಿಖರ ಮತ್ತು ವಾಸ್ತವ ವಿಳಾಸ ಹೊಂದಿದ ಮತದಾರರು ಆಧಾರ್ ಲಿಂಕ್ ನಂತರ ಉಂಟಾದ ಗೊಂದಲವನ್ನು ಪರಿಹರಿಸಿಕೊಳ್ಳಲು ತಹಶೀಲ್ ಮತ್ತು ಚುನಾವಣಾ ಇಲಾಖೆಗಳು ಸುತ್ತುವ ಪರಿಸ್ಥಿತಿಗೆ ಜನರನ್ನು ಸರ್ಕಾರ ತಳ್ಳಿದೆ.
ಚಿಲುಮೆ ಎಂಟರ್ಪ್ರೈಸೆಸ್ ಪ್ರಕರಣ ನಂತರ ಜಿಲ್ಲೆಯಲ್ಲಿ ಜನರು ತಮ್ಮ ಮತದಾರರ ಚೀಟಿಗಳನ್ನು ಪರಿಶೀಲಿಸಿದಾಗ ವಿಳಾಸ ಮತ್ತು ವಾರ್ಡ್ ಬದಲಾವಣೆಗೆ ಜನ ಬೆಚ್ಚಿ ಬಿದ್ದಿದ್ದಾರೆ. ಈ ಸಮಸ್ಯೆಯನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕು ಎನ್ನುವ ದಾಖಲಾಟಕ್ಕೆ ಈಗ ಜನ ಹೀಡಾಗಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ, ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಚುನಾವಣಾ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮತದಾರರು ತೊಂದರೆಗೆ ಗುರಿಯಾಗುವುದಕ್ಕೆ ಸ್ವತಃ ಸರ್ಕಾರವೇ ಹೊಣೆಯಾಗಲಿದೆ.
ಸ್ಥಳೀಯ ಕಾಂಗ್ರೆಸ್, ಜಾದಳ, ಬಿಜೆಪಿ ಪಕ್ಷಗಳು ಹಾಗೂ ಆಯಾ ವಾರ್ಡ್‌ನ ಜನಪ್ರತಿನಿಧಿಗಳು ತಮ್ಮ ತಮ್ಮ ವಾರ್ಡ್ ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಇಲ್ಲಿ ಆದ ಲೋಪದೋಷಗಳ ಬಗ್ಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಾರದಿದ್ದರೆ, ಮುಂಬರುವ ಚುನಾವಣೆಯಲ್ಲಿ ಸರ್ಕಾರದ ಈ ತಪ್ಪಿಗೆ ಮತದಾರರು ಮತ್ತು ಅಭ್ಯರ್ಥಿಗಳ ಪಾಲಿಗೆ ಭಾರೀ ಬಹುದೊಡ್ಡ ಸಂಕಷ್ಟ ತಂದೊಡ್ಡಲಿದೆ.