ಮತದಾರರ ಓಲೈಕೆಗೆ ಬಿಜೆಪಿಯಿಂದ ಕೃತಕ ಬುದ್ಧಿ ಮತ್ತೆ

ನವದೆಹಲಿ,ಮಾ.೧೮- ದೇಶದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರ ಗದ್ದು ಹಿಡಿಯಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿರುವ ನಡುವೆಯೇ ಅದರ ಲಾಭ ಪಡೆಯಲು ಬಿಜೆಪಿ ಭಾಷಾ ತಡೆಗೋಡೆ ಮುರಿದು ಕೃತಕ ಬುದ್ದಿ ಮತ್ತೆ ಬಳಸಿಕೊಳ್ಳಲು ಮುಂದಾಗಿದೆ.
ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರಕ್ಕೆ ತೆರಳುವ ರಾಜ್ಯಗಳ ಭಾಷೆಗಳನ್ನು ಕೃತಕ ಬುದ್ದಿಮತ್ತೆ ಬಳಸಿಕೊಂಡು ಸ್ಥಳೀಯ ಭಾಷೆಯಲ್ಲಿ ಪ್ರಚಾರ ಮಾಡಿ ಜನರ ಮನ ಗೆಲ್ಲಲು ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾ, ಒಡಿಯಾ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣಗಳನ್ನು ಪ್ರಸಾರ ಮಾಡಲು ಬಿಜೆಪಿ ಹಲವಾರು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಮೀಸಲಿಟ್ಟಿದೆ.
ಹಿಂದಿ ಮಾತನಾಡುವ ಉತ್ತರ ಮತ್ತು ಪಶ್ಚಿಮ ಭಾಗದ ಜನರಿಗೆ ಪ್ರಧಾನಿ ಭಾಷಣ ಕಷ್ಟವಾಗದು ಆದರೆ, ಹಿಂದಿ ಬಾರದ ರಾಜ್ಯಗಳ ಜನರಿಗೆ ಪ್ರಧಾನಿ ವಿಷಯ ಅವರಿಗೆ ತಲುಪುವಂತಾಗಲು ಕೃತಕ ಬುದ್ದಿಮತ್ತೆಯನ್ನು ಬಳಸಿಕೊಳ್ಳಲಾಗಿದೆ.
ಈ ಬಾರಿ, ಪ್ರಾದೇಶಿಕ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಮುಖ ಸವಾಲಾಗಿ ಉಳಿದಿರುವ ಪೂರ್ವ ಮತ್ತು ದಕ್ಷಿಣ ರಾಜ್ಯಗಳಿಂದ ಗರಿಷ್ಠ ಸ್ಥಾನಗಳನ್ನು ಖಚಿತಪಡಿಸಿಕೊಳ್ಳುವುದು ಪಕ್ಷದ ಗಮನವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣ ಜನರೊಂದಿಗೆ ನೇರ ತೆಲುಗು ಸಂವಾದದ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ತೆಲುಗಿನಲ್ಲಿ ತಮ್ಮ ಭಾಷಣಗಳನ್ನು ಪ್ರಸಾರ ಮಾಡಲು ಕೃತಕ ಬುದ್ಧಿಮತ್ತೆಯ ಬಳಕೆ ಮಾಡಲು ಪ್ರಧಾನಿ ಮೋದಿ ಮುಂದಾಗಿದ್ಧಾರೆ.
ಹೈದರಾಬಾದ್‌ನಿಂದ ದಕ್ಷಿಣಕ್ಕೆ ೧೩೪ ಕಿಮೀ ದೂರದಲ್ಲಿರುವ ನಾಗರ್‌ಕರ್ನೂಲ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು “ನಾನು ನಿಮ್ಮೊಂದಿಗೆ ಬೆರೆಯಲು ಬಯಸುತ್ತೇನೆ ಮತ್ತು ತೆಲುಗಿನಲ್ಲಿ ಸಂದೇಶವನ್ನು ಹರಡಲು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ದಯವಿಟ್ಟು ತೆಲುಗಿನ ನಮೋ ಹ್ಯಾಂಡಲ್‌ಗೆ ಹೋಗಿ; ನನ್ನ ಎಲ್ಲಾ ಭಾಷಣಗಳನ್ನು ನೀವು ತೆಲುಗಿನಲ್ಲಿ ಕೇಳಬಹುದು” ಎಂದು ಮನವಿ ಮಾಡಿದ್ದಾರೆ.
ತೆಲಂಗಾಣ ಬಿಜೆಪಿ ಮುಖ್ಯಸ್ಥ ಮತ್ತು ಸಿಕಂದರಾಬಾದ್ ಸಂಸದ ಅಭ್ಯರ್ಥಿ ಕಿಶನ್ ರೆಡ್ಡಿ ಮಾತನಾಡಿ ‘ನಮ್ಮ ಭಾಷೆಯಲ್ಲಿ ಸಂವಹನ ಮಾಡಲು ಬಯಸುವ ಪ್ರಧಾನಿ ಪಡೆದಿದ್ದೇ ನಮ್ಮ ಪುಣ್ಯ’ ಎಂದಿದ್ದಾರೆ.