
ಬೆಂಗಳೂರು, ಮೇ ೮- ಜಿದ್ದಾಜಿದ್ದಿನ ಅಖಾಡವಾಗಿರುವ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆಬೀಳಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ರಾಜ್ಯದ ಹಲವೆಡೆ ಅಬ್ಬರದ ಪ್ರಚಾರ ನಡೆಸಿ, ಕಡೆಗಳಿಗೆಯ ಮತಬೇಟೆ ನಡೆಸಿದರು.
ಮೇ ೧೦ ರಂದು ಮತದಾನ ನಡೆಯಲಿದ್ದು, ಕೇವಲ ಮನೆ ಮನೆ ಪ್ರಚಾರ ಅವಕಾಶ ಕಲ್ಪಿಸಲಾಗಿದೆ. ಇಂದು ಸಂಜೆ ಪ್ರಚಾರ ಮುಕ್ತಾಯಗೊಂಡ ನಂತರ ಕ್ಷೇತ್ರ ತೋರಿಯುವಂತೆ ಚುನಾವಣಾ ಆಯೋಗ ಕಟ್ಟಾಜ್ಞೆ ವಿಧಿಸಿದೆ.ಚುನಾವಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗಿದೆ.
ಮೂರು ದಿನಗಳ ಕಾಲ ಪ್ರಧಾನಿಯವರು ಬೆಂಗಳೂರಿನಲ್ಲಿ ರೋಡ್ ಶೋ ರಾಜ್ಯದ ಹಲವೆಡೆ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ದೆಹಲಿಗೆ ವಾಪಸ್ಸಾಗಿದ್ದಾರೆ. ಈಗ ಬಿಜೆಪಿ ತಾರಾ ಪ್ರಚಾರಕರು ಅಂತಿಮ ಹಂತದ ಮತಯಾಚನೆಯಲ್ಲಿ ತೊಡಗಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿ ಅಬ್ಬರದ ಪ್ರಚಾರ ನಡೆಸಿದರು. ಹನುಮರ ಹಳ್ಳಿ, ಹಿರೇಮಲ್ಲೂರ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಮತಯಾಚಿಸಿದರು. ಇದೇ ವೇಳೆ ಬೆಂಗಳೂರಿನ ಹಲವೆಡೆ ಕೇಂದ್ರ ಸಚಿವ ವಿ.ಕೆ. ಸಿಂಗ್, ರಾಜರಾಜೇಶ್ವರಿ ನಗರ ಮತ್ತು ಜಯನಗರದಲ್ಲಿ ಪ್ರಚಾರ ಕೈಗೊಂಡರು.
ಕೇಂದ್ರ ಸಚಿವ ಎಲ್. ಮುರುಗನ್ ಚಾಮರಾಜಪೇಟೆಯಲ್ಲಿ ಮತಯಾಚಿಸಿದರೆ ಬೆಂಗಳೂರಿನ ಪದ್ಮನಾಭನಗರದಲ್ಲಿ ಸಚಿವ ಆರ್. ಅಶೋಕ್ ಅಪಾರ ಬೆಂಬಲಿಗರೊಂದಿಗೆ ಮತಯಾಚಿಸಿದರು.
ಮಹಾರಾಷ್ಟ್ರ ಮುಖಮಂತ್ರಿ ಏಕನಾಥ್ ಶಿಂಧೆ ಧರ್ಮಸ್ಥಳ, ಉಡುಪಿ, ಕಾಪುಗಳಲ್ಲಿ ಪ್ರಚಾರ ನಡೆಸಿದರು. ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ರಾಮನಗರ, ನಾಗಮಂಗಲ ಪ್ರಚಾರ ನಡೆಸಿ ಮತಯಾಚಿಸಿದರು.
ಮತ್ತೊಂದೆಡೆ ಪ್ರತಿಪಕ್ಷ ಕಾಂಗ್ರೆಸ್ ಕೂಡ ಅಂತಿಮ ಚರಣದಲ್ಲಿ ವ್ಯಾಪಕ ಪ್ರಚಾರ ನಡೆಸಿದರು. ಬೆಂಗಳೂರಿನಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ನಡೆಸಿದರು. ರಾಜ್ಯ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದ ಕೆ.ಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಸ್ವಕ್ಷೇತ್ರ ಕನಕಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ವಿಪಕ್ಷ ನಾಯಕ ಸಿದ್ದರಾiಯ್ಯ, ವರುಣ ಕ್ಷೇತ್ರ ಕಾರ್ಯಕರ್ತರನ್ನು ತಾವು ತಂಗಿರುವ ಹೋಟೆಲ್‌ಗೆ ಕರೆಸಿಕೊಂಡು ಗೆಲುವಿಗಾಗಿ ರಣತಂತ್ರ ರೂಪಿಸಿದರು. ಈ ಹಿಂದೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಗಿರುವ ತಪ್ಪುಗಳನ್ನು ಮರುಕಳುಹಿಸಿದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದ್ದಾರೆ. ಬಳಿಕ ವರುಣ ಕ್ಷೇತ್ರದಲ್ಲೂ ಅಂತಿಮ ಹಂತದಲ್ಲಿ ಪ್ರಚಾರ ನಡೆಸಿದರು. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಸಚಿವ ವಿ. ಸೋಮಣ್ಣ ಅವರ ನಡುವೆ ಭಾರಿ ಪೈಪೋಟಿ ಕಂಡು ಬಂದಿದೆ.
ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ತಂತ್ರ ರೂಪಿಸಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರ್ ಸ್ವಾಮಿ , ರಾಮನಗರದಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಸಿದರು. ಚನ್ನಪಟ್ಟಣದ ಶೇರ್ವಾ ವೃತ್ತದಿಂದ ಮಂಗಳವಾರ ಪೇಟೆವರೆಗೂ ಬೈಕ್ ರ್‍ಯಾಲಿ ಬಲಪ್ರದರ್ಶನ ನಡೆಸಿದರು. ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಜೆಡಿಎಸ್ ಪರ ಘೋಷಣೆ ಕೂಗಿದರು. ಕುಮಾರ ಸ್ವಾಮಿ ಪರ ಪ್ರಚಾರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ನಿಖಿಲ್ ಕುಮಾರ್ ಸ್ವಾಮಿ ಪಾಲ್ಗೊಂಡು ಮತಯಾಚಿಸಿದರು.