ಮತದಾರರು ಮೇ 7ರಂದು ತಪ್ಪದೇ ಮತ ಚಲಾಯಿಸಿ

oplus_2

ಕಲಬುರಗಿ:ಏ.14:ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಮತದಾನ ದಿನದಂದು ತಪ್ಪದೇ ತಮ್ಮ ಮತ ಚಲಾಯಿಸಬೇಕೆಂದು ಅಫಜಲಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಹೇಳಿದರು.

ಅವರು ಇತ್ತೀಚೆಗೆ ಅಫಜಲಪುರ ತಾಲೂಕಿನ ಗೊಬ್ಬುರ(ಬಿ) ಗ್ರಾಮದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆರೆ ಹೊಳೆತ್ತುವ ಕಾಮಗಾರಿ ಸ್ಥಳದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮತದಾರರು ಯಾವುದೇ ಕಾರಣಕ್ಕೂ ಮತ ಮಾರಾಟ ಮಾಡಬಾರದು. ಮತದಾನ ದಿನದಂದು ಪ್ರತಿಯೊಬ್ಬರೂ ತಪ್ಪದೆ ತಮ್ಮ ಮತ ಚಲಾಯಿಸಬೇಕು. ಗೊಬ್ಬುರ (ಬಿ) ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶೇ. 100 ರಷ್ಟು ಮತದಾನ ಆಗಬೇಕು ಎಂದು ಕರೆ ನೀಡಿದರು.

ಬೇಸಿಗೆ ಬರಗಾಲ ಇರುವುದರಿಂದ ಎಲ್ಲಾ ಕಡೆ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು. ಗ್ರಾಮದ ಜನರಿಗೆ ಖಾಸಗಿ ಬೋರವೆಲ್ ಗಳಿಂದ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಜಿ ಮಲಂಗ್, ತಾಂತ್ರಿಕ ಸಂಯೋಜಕರು ಮಾಲಾಶೀ, ತಾಂತ್ರಿಕ ಸಂಯೋಜಕ ಅರವಿಂದ್, ಐಇಸಿ ಸಂಯೋಜಕರು ಶೋಭಾ ಕಣಮಸ್ಕರ್, ಡಿ.ಇ.ಓ. ಆನಂದ ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.