ಮತದಾರರು ತಪ್ಪದೇ ಮತದಾನ ಮಾಡಿ

ಕಲಬುರಗಿ :ಏ.12: ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ತುಂಬಾ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯ ಜೀವಾಳವಾಗಿದ್ದು, ಎಲ್ಲಾ ಮತದಾರರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಬೇಕು. ಯಾವುದೇ ಆಸೆ-ಆಕಾಂಕ್ಷೆಗಳಿಗೆ ಒಳಗಾಗದೇ, ಪ್ರಜ್ಞಾಪೂರ್ವಕವಾಗಿ ಮತ್ತು ಸೂಕ್ತ ವ್ಯಕ್ತಿಗೆ ಮತದಾನ ಮಾಡಿ, ಚುನಾಯಿಸಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಲು ಸಾಧ್ಯವಿದೆ ಎಂದು ಗುವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ವಾಸುದೇವ ಸೇಡಂ ಹೇಳಿದರು.
ಸಮೀಪದ ನಂದೂರ(ಕೆ) ಗ್ರಾಮದ ಬನ್ನಿ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪ್ರಥಮ ಬಾರಿಗೆ ಮತ ಚಲಾಯಿಸುವವರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಜ್ಞಾನಿಯಾಗಿರುವ ಮತ್ತು ಸಮಾಜದ ಬಗ್ಗೆ ನಿಜವಾದ ಕಳಕಳಿಯುಳ್ಳ ವ್ಯಕ್ತಿಯನ್ನು, ಭ್ರಷ್ಟಾಚಾರ ರಹಿತವಾಗಿ, ಹಣ, ಹೆಂಡ ಸ್ವೀಕರಿಸದೇ, ಪ್ರಾಮಾಣಿಕವಾಗಿ ಮತ ಚಲಾಯಿಸಿ, ಅಂತಹ ಜನಪ್ರತಿನಿಧಿಗಳನ್ನು ಚುನಾಯಿಸಿದರೆ, ಪ್ರಜಾಪ್ರಭುತ್ವದ ವ್ಯವಸ್ಥೆ ಬಲಿಷ್ಠವಾಗುವುದರ ಜೊತೆಗೆ, ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯವಿದೆ. ಪ್ರತಿಶತ ಮತದಾನವಾದರೆ ಅತ್ಯಂತ ಪ್ರಭಾವಶಾಲಿ ಜನನಾಯಕರು ದೊರೆಯಲು ಸಾಧ್ಯವಾಗುತ್ತದೆ. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಪ್ರಮುಖರಾದ ಲಕ್ಷ್ಮೀಕಾಂತ ಮಡಿವಾಳ, ಮಲ್ಲಿಕಾರ್ಜುನ ಮಡಿವಾಳ, ನಾಗಣ್ಣ, ಶ್ರೀದೇವಿ, ಜಗದೇವಪ್ಪ, ರೇವಮ್ಮ, ಮಲ್ಲಿಕಾರ್ಜುನ, ಲಕ್ಷ್ಮೀಕಾಂತ ಮಮ್ಮಾಣೆ, ಮಲ್ಲಿಕಾರ್ಜುನ ಹೂಗಾರ, ಅನಿಲಕುಮಾರ ಹೂಗಾರ, ಶಿವಶರಣಪ್ಪ ಮಡಿವಾಳ, ರವಿ ಮಡಿವಾಳ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.