ರಾಯಚೂರು,ಏ.೨೮- ಮೇ ೧೦ ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನ ಪ್ರತಿಶತ ಹೆಚ್ಚಳ ಮಾಡಬೇಕೆಂದು ಸಿರವಾರ ತಾ.ಪಂ ಐಇಸಿ ಸಂಯೋಜಕರಾದ ರಾಜೇಂದ್ರ ಕುಮಾರ ಹೇಳಿದರು.
ಅವರು ರಾಯಚೂರು ಜಿಲ್ಲೆಯ, ಸಿರವಾರ ತಾಲೂಕಿನ ನವಲಕಲ್ ಗ್ರಾಮ ಪಂಚಾಯತಿಯ ನಾರಬಂಡಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿಕಾರರಿಗೆ, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಅಂಗವಾಗಿ ಮತದಾರರಿಗೆ ಮತದಾನದ ಮಹತ್ವವನ್ನು ಅರಿಯಲು ಸ್ವಿಪ್ ಚಟುವಟಿಕೆಯಡಿ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಲಾಯಿತು.
ದೇಶದ ಸುಭದ್ರ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ತಪ್ಪದೇ ಮತದಾನ ಚಲಾಯಿಸಿ, ಪ್ರಜಾಪ್ರಭುತ್ವ ಗೆಲ್ಲಿಸಬೇಕು. ಮತದಾನ ದೇಶದ ಉತ್ತಮ ಭವಿಷ್ಯಕ್ಕೆ ಬುನಾದಿ. ಮತದಾನ ಮಾಡುವ ಮೂಲಕ ಆ ಬುನಾದಿಯನ್ನು ಸದೃಢಗೊಳಿಸಿ ಎಂದರು. ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಶೇಷ ಚೇತನರು, ಹಿರಿಯ ನಾಗರಿಕರು ಮತದಾನ ಮಾಡುವಂತೆ ಕರೆ ನೀಡಿದರು.
ಈ ವರ್ಷ ಚುನಾವಣಾ ಆಯೋಗವು ಮನೆಯಲ್ಲಿಯೇ ಇದ್ದು ಮತದಾನ ಮಾಡುವ ಅವಕಾಶವನ್ನು ವಿಶೇಷ ಚೇತನರಿಗೆ ಹಾಗೂ ೮೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಕಲ್ಪಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲಾ ಕೂಲಿಕಾರರಿಗೆ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧನೆ ಮಾಡಿಸಲಾಯಿತು.
ಏಪ್ರಿಲ್ ೧ ರಿಂದ ನರೇಗಾ ಕೂಲಿ ಮೊತ್ತವು ೩೦೯ ರಿಂದ ೩೧೬ ಕ್ಕೆ ಹೆಚ್ಚಿಸಲಾಗಿದೆ. ಯೋಜನೆಯಡಿ ಸಿಗುವ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆಯಲು ಮಾಹಿತಿ ತಿಳಿಸಲಾಯಿತು.
ಜಿಕೆಎಂ ಕವಿತಾ, ಮೇಟ್, ಕೂಲಿಕಾರರು ಈ ಸಂದರ್ಭದಲ್ಲಿ ಇದ್ದರು.