
ದಾವಣಗೆರೆ.ಮಾ.೧೮: ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಗಮನಿಸುತ್ತಿರುವ ಜನರು ನಮ್ಮನ್ನು ಗೆಲ್ಲಿಸಿದ್ದಾರೆ ಎನ್ನುವ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು, ಮತದಾರರಿಗೆ ಆಮಿಷ ಒಡ್ಡುವ ನಿಟ್ಟಿನಲ್ಲಿ ಸೀರೆ, ಕುಕ್ಕರ್ ಗಳನ್ನು ಏಕೆ ಹಂಚುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಯಶವಂತ್ ರಾವ್ ಜಾಧವ್ ಪ್ರಶ್ನೆ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸೆಸ್ ಹಾಗೂ ಮಲ್ಲಿಕಾರ್ಜುನ್ ಅವರ ವತಿಯಿಂದ ಹಂಚಿದ್ದರು ಎನ್ನಲಾದ ಸೀರೆ, ಕುಕ್ಕರ್ ಗಳನ್ನು ಪ್ರದರ್ಶಿಸಿದರು.ದಾವಣಗೆರೆ ನಾಯಕರು ನಾವೇ, ಅಭಿವೃದ್ದಿ ಯ ಹರಿಕಾರರು ನಾವೇ ಎಂದು ಹೇಳಿಕೊಳ್ಳುವ ಇವರು, ಬಿಜೆಪಿಯ ೪೦ ಪರ್ಸೆಂಟ್ ಕುರಿತು ಟೀಕಿಸುವವರು ಅಭಿವೃದ್ಧಿ ಮಾಡಿರುವ ಹಿನ್ನೆಲೆಯಲ್ಲಿ ಮಾತು ಕೇಳಬೇಕಿತ್ತು. ಅದು ಬಿಟ್ಟು ಕಳಪೆ ಕುಕ್ಕರ್, ಕಡಿಮೆ ದರದ ಸೀರೆ ಹಂಚಿ ಮತದಾರರಿಗೆ ಆಮಿಷ ಒಡ್ಡುವ ರೀತಿ ಸರಿಯೇ ಎಂದು ಆಕ್ಷೇಪಣೆ ಎತ್ತಿದರು.ಹಗಲು ದರೋಡೆ ಮಾಡುವವರು ಕಾಂಗ್ರೆಸ್ ನವರು, ಬಿಜೆಪಿ ಮೇಲೆ ಏಕೆ ಗೂಬೆ ಕೂರಿಸುವುದು? ಮೊದಲು ಇವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎಲ್ಲರಿಗೂ ಗೊತ್ತಿದೆ. ಇದೆಲ್ಲಾ ಅಕ್ರಮ ಆಸ್ತಿಗಳನ್ನೂ ನಿರ್ವಹಣೆ ಮಾಡಲು ಅಧಿಕಾರ ಬೇಕು. ಹಾಗಾಗಿ ಅಪ್ಪ, ಮಗ ಇಬ್ಬರೂ ಚುನಾವಣೆಗೆ ನಿಲ್ಲುತ್ತಾರೆ ಎಂದು ಹೇಳಿದರು.ದಾವಣಗೆರೆ ದಕ್ಷಿಣ ಕ್ಷೇತ್ರದ ಅಲ್ಪಸಂಖ್ಯಾತರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇದುವರೆಗೂ ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ದಾರಿ ತಪ್ಪಿಸುತ್ತಿದ್ದರು. ಆದರೆ ಅವರುಗಳು ಸಹ ಈ ಬಾರಿ ಪ್ರಬುದ್ಧರಾಗಿದ್ದು, ಈಗಾಗಲೇ ಸಾವಿರಾರು ಅಲ್ಪಸಂಖ್ಯಾತರು ಬಿಜೆಪಿಗೆ ಸೇರಿದ್ದಾರೆ ಎಂದರು.ದಕ್ಷಿಣದಲ್ಲಿ ಉತ್ತಮ ರಸ್ತೆಗಳು, ಪಾರ್ಕ್, ಆಸ್ಪತ್ರೆಗಳು. ಇಲ್ಲ. ಇನ್ನು ದಾವಣಗೆರೆಗೆ ದಾನಿಗಳ ಊರು ಎಂದು ಹೆಸರು ಬಂದಿದ್ದು ಇವರಿಂದ ಅಲ್ಲಿ. ರಾಜನಹಳ್ಳಿ, ಚನ್ನಗಿರಿ, ಚಿಗಟೇರಿ ಮನೆತನಗಳಿಂದ ಎಂದರಲ್ಲದೆ, ಈ ಬಾರಿ ಅವರ ಆಸೆ ಈಡೇರುವುದಿಲ್ಲ. ಜನರಿಗೆ ಎಲ್ಲ ವಿಷಯಗಳು ಅರ್ಥವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ, ಲೋಕಿಕೆರೆ ನಾಗರಾಜ್, ರಾಜನಹಳ್ಳಿ ಶಿವಕುಮಾರ್, ಸೋಗಿ ಶಾಂತಕುಮಾರ್, ಪಿ.ಸಿ. ಶ್ರೀನಿವಾಸ್, ಎಲ್.ಡಿ. ಗೋಣೆಪ್ಪ, ಟಿಂಕರ್ ಮಂಜಣ್ಣ, ಗೋಪಾಲ್ ರಾವ್ ಮಾನೆ, ಶಿವನಗೌಡ ಪಾಟೀಲ್, ಹನುಮಂತಪ್ಪ, ಪವನ್, ಸುರೇಶ್ ಹಿಂದೆ, ಪ್ರವೀಣ್ ಇನ್ನಿತರರಿದ್ದರು.