
ಮಂಡ್ಯ.ಮಾ.14:- ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಆಮಿಷ ಒಡ್ಡುವುದರ ಬಗ್ಗೆ ದೂರು ಕೇಳಿ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣಾ 2023ರ ಹಿನ್ನಲೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿಂದು ವಿವಿಧ ರಾಜಕೀಯ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು. ಚುನಾವಣೆಗಳು ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯಬೇಕು ಎಂದರು.
ಮತದಾರರಿಗೆ ಆಮಿಷ ಒಡ್ಡಲು ಅಕ್ರಮವಾಗಿ ವಸ್ತುಗಳು ಹಣ ಸಂಗ್ರಹಿಸಿಟ್ಟಿರುವ ಬಗ್ಗೆ ದೂರು ಕೇಳಿ ಬಂದರೆ ದಾಳಿ ನಡೆಸಿ ನಿಯಮಾನುಸಾರ ಎಫ್ ಐ ಆರ್ ದಾಖಲು ಮಾಡಲಾಗುವುದು ಎಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾರಿಕಾರಿ ಎನ್ ಯತೀಶ್ ಅವರು ಮಾತನಾಡಿ ಚುನಾವಣೆಯ ಸಭೆ ಸಮಾರಂಭಗಳಲ್ಲಿ ಪ್ರಚೋದನಕಾರಿ ಭಾಷಣ ಹಾಗೂ ಅಹಿತಕರ ಘಟನೆಗಳು ಕಂಡು ಬಂದರೆ ಆಯೋಜಕರ ಮೇಲೆ ಎಫ್ ಐ ಆರ್ ದಾಖಲು ಮಾಡಿ ಕ್ರಮಕೈಗೊಳ್ಳಲಾಗುವುದು ಎಂದರು.
ಅಬಕಾರಿ ಇಲಾಖೆಯ ಉಪ ಆಯುಕ್ತೆ ಮಹದೇವಿ ಬಾಯಿ ಅವರು ಮಾತನಾಡಿ ಜಿಲ್ಲೆಯಲ್ಲಿ ಒಂದು ವಾರದಲ್ಲಿ 129 ದಾಳಿ ನಡೆಸಿ 117 ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 78.02 ಲೀ. ಮದ್ಯ, 0.400 ಲೀ ಬೀರ್, 0.850 ಗ್ರಾಂ ಗಾಂಜಾ ಹಾಗೂ 3 ವಾಹನವನ್ನು ವಶಪಡಿಸಿಕೊಂಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು, ಉಪ ವಿಭಾಗಾಧಿಕಾರಿ ಹೆಚ್ ಎಸ್ ಕೀರ್ತನ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು