ಮತದಾರರಲ್ಲಿ ಹುಮ್ಮಸು ಮೂಡಿಸಿದ ಸ್ವೀಪ್ ಕಾರ್ಯಚಟುವಟಿಕೆ

ಗದಗ,ಮೇ1 : ಶಿರಹಟ್ಟಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ, ತಾಲೂಕು ಸ್ವೀಪ್ ಸಮಿತಿ ಮತದಾರರನ್ನು ಆಕರ್ಷಿಸಲು ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಪಾರಂಪರಿಕ ವೃತ್ತಿ, ಸಾಂಸ್ಕೃತಿಕ ಕಲೆ ಹಾಗೂ ಸ್ಥಳೀಯರ ಅಭಿಲಾಷೆಯನ್ನು ಮನಗೊಂಡು ಮತದಾನ ಕೇಂದ್ರವನ್ನು ಅಲಂಕರಿಸಲು ಆರಂಭಿಸಿದೆ.
ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಪುರಸಭೆ ಹಾಗೂ ಗ್ರಾಮೀಣ ಭಾಗಗಳು ಸೇರಿ ಒಟ್ಟು 5 ಮತಗಟ್ಟೆಗಳನ್ನು ಆಕರ್ಷಕಗೊಳಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾಡಳಿತ ಮೂರು ಥೀಮ್ (ವಿಷಯ)ಗಳನ್ನು ಆಯ್ಕೆ ಮಾಡಿ, ಮತಗಟ್ಟೆಗಳನ್ನು ಪೇಂಟಿಂಗ್ ಮೂಲಕ ಆಕರ್ಷಕಗೊಳಿಸಲು ಗುರುತಿಸಿದೆ. ಸಖಿ ಮತಗಟ್ಟೆ, ಯುವ ಮತಗಟ್ಟೆ ಮತ್ತು ಶಿಗ್ಲಿ ಗ್ರಾಮದ ಪಾರಂಪರಿಕ ವೃತ್ತಿಯಾದ ನೇಕಾರಿಕೆಯ ಚಿತ್ರಗಳ ಕಣ್ಮನ ಸೆಳೆಯುವಂತಿವೆ.
ಪಾರಂಪರಿಕ ಮತಗಟ್ಟೆ: ಶಿಗ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ: 202, 203 ಮತ್ತು 204 ಗಳನ್ನು ಪಾರಂಪರಿಕ ಮತಗಟ್ಟೆಗಳಾಗಿ ರೂಪಿಸಲಾಗಿದೆ. ಸ್ಥಳೀಯ ಪಾರಂಪರಿಕ ಕೈಮಗ್ಗದ ನೇಕಾರಿಕೆ ವೃತ್ತಿಯ ಚಿತ್ರಗಳಿಗೆ ಇಲ್ಲಿ ಆದ್ಯತೆ ನೀಡಲಾಗಿದೆ. ಶಿಗ್ಲಿ ಸೀರೆಯಿಂದಲೇ ಹೆಸರುವಾಸಿಯಾದ ಗ್ರಾಮ ಇದಾಗಿದ್ದು, ಈಗಲೂ ಇಲ್ಲಿನ ನೂರಾರು ಕುಟುಂಬಗಳು ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿವೆ. ಸ್ಥಳೀಯರ ಆಶಯಕ್ಕೆ ತಕ್ಕಂತೆ ಇಲ್ಲಿನ ಮೂರು ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳಾಗಿ ಚಿತ್ರರೂಪದಲ್ಲಿ ಕಂಗೊಳಿಸಲಿವೆ. ಶಿಗ್ಲಿ ಸೀರೆ ತಯಾರಿಕೆಯ ಕೈಮಗ್ಗ ಮಾದರಿ ಹಾಗೂ ಸಿದ್ದವಾದ ಸೀರೆಯ ಆಕೃತಿಗಳು ಮತಗಟ್ಟೆಯ ಗೋಡೆಯ ಮೇಲೆ ಬಣ್ಣದ ರೂಪ ಪಡೆದು ಚಿತ್ತಾಕರ್ಷಕವಾಗಿವೆ. ಓಟು ನಮ್ಮ ಶಕ್ತಿ, ಮತ ನೀಡಿ ಕರ್ತವ್ಯ ಪಾಲಿಸಿ, ಭರವಸೆಯ ನಾಳೆಗಾಗಿ ನಮ್ಮ ಮತ ಎಂಬ ಬರವಣಿಗೆಯ ಸಾಲುಗಳು ಮತದಾರರಲ್ಲಿ ಮತದಾನ ಮಾಡಬೇಕೆಂಬ ಪ್ರಜ್ಞೆ ಜಾಗೃತಗೊಳಿಸಲು ಪೂರಕವಾಗಿವೆ.
ಸಖಿ ಮತಗಟ್ಟೆ: ನಗರದ ಬಸ್ತಿಬಣ ಪ್ರದೇಶದಲ್ಲಿಯ ಮತಗಟ್ಟೆ ಸಂಖ್ಯೆ- 108 ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-4 ಅನ್ನು ಸಖಿ ಮತಗಟ್ಟೆಯಾಗಿ ಚಿತ್ರಿಸಲಾಗಿದೆ. ಸಂಪೂರ್ಣ ಮತಗಟ್ಟೆಗೆ ಗುಲಾಬಿ ಬಣ್ಣದಲ್ಲಿ ಹಚ್ಚಲಾಗಿದ್ದು, ಮಹಿಳೆಯ ತೋರು ಬೆರಳನ್ನು ಹಣೆಯ ಸಿಂಧೂರದ ಭಾಗಕ್ಕೆ ಮತದಾನದ ಶಾಯಿ ಬರುವ ಹಾಗೆ ಚಿತ್ರ ಬಿಡಿಸಲಾಗಿದೆ. ಮತದಾನ ಪ್ರಜಾಪ್ರಭುತ್ವ ಗಟ್ಟಿಯಾಗುವ ಸಂಕೇತವನ್ನು ಸೂಚಿಸುವಂತಿದೆ. ಜತೆಗೆ ಮತ ನೀಡಿ ಕರ್ತವ್ಯ ಪಾಲಿಸಿ, ನಿಮ್ಮ ಮತ ನಿಮ್ಮ ಶಕ್ತಿ, ಭ್ರಷ್ಟಾಚಾರ ಅಳಿಸಿ ಮತ ಚಲಾಯಿಸಿ, ಮತದಾನ ನಮ್ಮ ಹಕ್ಕು ಬರವಣಿಗೆಯ ಸಾಲುಗಳು ಮತದಾನದ ಮಹತ್ವವನ್ನು ಸಾರುತ್ತಿವೆ.
ಐತಿಹಾಸಿಕ ಮತಗಟ್ಟೆ: ಲಕ್ಷ್ಮೇಶ್ವರದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿಯ ಮತಗಟ್ಟೆ ಸಂಖ್ಯೆ- 117ನ್ನು ಐತಿಹಸಸಿಕ ವಿಷಯ ಚಿತ್ರಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ. ತಪ್ಪದೆ ಮತದಾನ ಮಾಡಿ, ಮತದಾನ ಮಾಡುವುದು ನಿಮ್ಮ ಜವಾಬ್ದಾರಿ ಮತ್ತು ಹಕ್ಕು, ಯೋಚಿಸಿ ಮತದಾನ ಮಾಡಿ, ನಿಮ್ಮ ಮತವನ್ನು ಮಾರಬೇಡಿ, ನಿಮ್ಮ ಮತ ನಾಡಿಗೆ ಹಿತ ಎಂಬ ಸಾಲುಗಳು ಮತದಾರರ ಹಕ್ಕು ಮತ್ತು ಜವಾಬ್ದಾರಿಯ ಅರಿವು ಮೂಡಿಸಲಿವೆ.
ಯುವ ಮತಗಟ್ಟೆ: ಬಟ್ಟೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತಗಟ್ಟೆ ಸಂಖ್ಯೆ- 76 ಕುಂದ್ರಳ್ಳಿ ತಾಂಡಾದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯನ್ನು ಯುವ ಮತಗಟ್ಟೆಯನ್ನಾಗಿ ರೂಪಿಸಲಾಗಿದೆ. ಯುವ ಮತದಾರರು ಉಲ್ಲಾಸಿತರಾಗಿ ಮತ ಚಲಾವಣೆಯಲ್ಲಿ ತೊಡಗಿರುವಂತೆ ಚಿತ್ರರೂಪದಲ್ಲಿ ಬಿಡಿಸಲಾಗಿದೆ. ಅಲ್ಲದೆ ಯುವ ಶಕ್ತಿ ದೇಶದ ಶಕ್ತಿ, ನಿಮ್ಮ ಮತ ಮಾರಿಕೊಳ್ಳಬೇಡಿ, ನಿಮ್ಮ ಒಂದು ಮತವು ಮುಂದಿನ ದೊಡ್ಡ ಬದಲಾವಣೆಯಾಗಬಹುದು ಎಂಬ ಬರಹದ ಸಾಲುಗಳು ಯುವ ಮತದಾರರನ್ನು ಭವಿಷ್ಯದ ಕುರಿತು ಯೋಚಿಸಿ ಮತಚಲಾಯಿಸುವಂತೆ ಪ್ರೇರಣೆ ನೀಡಲಿದೆ.