ಮತದಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದ ಆಕರ್ಷಕ ಪಥ ಸಂಚಲನ

ಅಫಜಲಪುರ:ಏ.8: ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿಯೊಂದಿಗೆ ಪೊಲೀಸ್ ತಂಡದಿಂದ ರೂಟ್ ಮಾರ್ಚ್ ನಡೆಯಿತು.

ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರ ಆದೇಶದ ಮೇರೆಗೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಅಂಗವಾಗಿ ಶಾಂತಿ ಸುವ್ಯವಸ್ಥೆ ಕಾಪಾಡಲು ಐ.ಟಿ.ಬಿ.ಪಿ ಯೋಧರು ಹಾಗೂ ಪೋಲಿಸ್ ಇಲಾಖೆ ಹಮ್ಮಿಕೊಂಡ ಆಕರ್ಷಕ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.

ಪಟ್ಟಣದ ಪೊಲೀಸ್ ಠಾಣೆಯಿಂದ ಆರಂಭವಾದ ಪಥ ಸಂಚಲನ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಮಳೇಂದ್ರ ಶಿವಾಚಾರ್ಯರ ಸಂಸ್ಥಾನ ಹಿರೇಮಠ, ಚೌಡಿ, ಮಾರುಕಟ್ಟೆ, ಲಕ್ಷ್ಮೀ ದೇವಸ್ಥಾನದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸಂಚರಿಸಿದ ಪಥ ಸಂಚಲನವು ಮತದಾರರಲ್ಲಿ ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿತು.

ಈ ವೇಳೆ ಪಿಎಸ್ಐ ಭೀಮರಾಯ ಬಂಕ್ಲಿ ಮಾತನಾಡಿ, ಪ್ರತಿಯೊಬ್ಬ ಅರ್ಹ ಮತದಾರ ಮತದಾನದಿಂದ ವಂಚಿತವಾಗದೆ ನಿರ್ಭಯವಾಗಿ ಮತಗಟ್ಟೆಗೆ ತೆರಳಿ ಕಡ್ಡಾಯವಾಗಿ ತಮ್ಮ ಮತಾಧಿಕಾರ ಚಲಾಯಿಸಬೇಕು. ಈ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಮುಕ್ತ ವಾತಾವರಣ ಕಲ್ಪಿಸಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದರು.

ಪಥ ಸಂಚಲನದ ನೇತೃತ್ವವನ್ನು ಐ.ಟಿ.ಬಿ.ಪಿ ಇನ್ಸ್ ಪೆಕ್ಟರ ಸುನೀಲಕುಮಾರ ಹಾಗೂ ಪಿಎಸ್ಐ ಭೀಮರಾಯ ಬಂಕ್ಲಿ ವಹಿಸಿಕೊಂಡರು.

ಪಥಸಂಚಲನದಲ್ಲಿ ಐ.ಟಿ.ಬಿ.ಪಿ ಯ 55 ಜನ ಯೋಧರು ಹಾಗೂ 22 ಜನ ಪೋಲಿಸ್ ಸಿಬ್ಬಂದಿ ಭಾಗವಹಿಸಿದ್ದರು.

ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಲು ಇಂಡೋ – ಟಿಬೆಟಿಯನ್ ಬಾರ್ಡರ್ ನ 91 ಜನ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು ತಾಲೂಕಿನ ಹಲವಡೆ 6 ಚೆಕ್ಪೋಸ್ಟ್ ಗಳನ್ನು ಹಾಕಲಾಗಿದ್ದು ವಾಹನ ತಪಾಸಣೆಗಾಗಿ ಕರ್ತವ್ಯಕ್ಕೆ ನೇಮಿಸಲಾಗಿದೆ.