ಮತದಾರರನ್ನು ಮರೆತು ಗುಪ್ತ ಸಭೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ

ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಮಾ.೦೯- ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಸ್ಪರ್ಧೆ ಮಾಡಲಿ ಕೈ ನಾಯಕರ ಬೆಂಬಲವಿದ್ದರೆ ಗೆದ್ದೆ ಗೆಲ್ಲುತ್ತೇವೆ ಎನ್ನುವುದಕ್ಕೆ ಒಂದಾನೊಂದು ಕಾಲವಿತ್ತು ಯಾವ ವ್ಯಕ್ತಿಯನ್ನು ನಿಲ್ಲಿಸಿದರು ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಜನರ ಅಥವಾ ಮತದಾರರ ಮನೋಭಾವವಿತ್ತು.
ಆದರೆ ಈಗ ಕಾಲ ಬದಲಾಗಿದೆ. ಅಭಿವೃದ್ಧಿಯ ಕೆಲಸಗಳನ್ನು ಮಾಡಿದ ವ್ಯಕ್ತಿಯನ್ನೇ ಸೋಲಿಸುವ ಶಕ್ತಿ ಜನರಲ್ಲಿದೆ ಅದರಂತೆಯೇ ಮತದಾರರನ್ನು ಮರೆತು ಮುಖಂಡರಿಗೆ ಮಾತ್ರ ಮಹತ್ವ ನೀಡುತ್ತಿರುವ ಮಾನ್ವಿ ಕಾಂಗ್ರೆಸ್ ನಾಯಕರ ಗುಪ್ತ ಸಭೆಗಳಿಂದ ಯಾರಿಗೆ ಲಾಭ ಯಾರಿಗೆ ನಷ್ಟು ಎನ್ನುವುದು ಅರಿಯಬೇಕಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಯಾಕೆಂದು ಅದು ಅರಿತುಕೊಂಡು ಮುಂದೆ ಸಾಗಬೇಕಾಗಿದೆ ಈಗಾಗಲೇ ಮಾನ್ವಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಯಾರಿಗೆ ಎನ್ನುವ ಗೊಂದಲ ಸೃಷ್ಟಿಯಾಗಿದ್ದು, ಮತದಾರ ಕೈ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ವಾಲುವಂತಹ ಸನ್ನಿವೇಶ ಸೃಷ್ಟಿಯಾಗಿದ್ದು ಇದನ್ನು ಜಿಲ್ಲಾ ಕಾಂಗ್ರೆಸ್ ಮುಖಂಡರಾಗಲಿ ಉಸ್ತುವಾರಿಗಳಾಲಿ ಅರಿತುಕೊಂಡು ಮುನ್ನಡೆಯಬೇಕಾಗಿದೆ.
ಮಾಜಿ ಸಂಸದ ಬಿ.ವಿ ನಾಯಕ, ಮಾಜಿ ಶಾಸಕ ಜಿ. ಹಂಪಯ್ಯ ನಾಯಕ, ಶರಣಪ್ಪ ಗುಡದಿನ್ನಿ, ಲಕ್ಷ್ಮೀದೇವಿ ನಾಯಕ, ಡಾ. ತನುಶ್ರೀ ಕಾಂಗ್ರೆಸ್ ಟಿಕೆಟಿಗಾಗಿ ಅರ್ಜಿ ಸಲ್ಲಿಸಿದ್ದು, ಈಗಾಗಲೇ ಎಂ. ಈರಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆಂದು ಘೋಷಣೆ ಮಾಡಿಯಾಗಿದೆ ಆದರೆ ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತಾರೋ ಎಂದು ಕಾಯುತ್ತಿದ್ದಾರೆ ಎನ್ನಿಸುತ್ತದೆ ಮತದಾರರು ಕೂಡ ಅಭ್ಯರ್ಥಿಯ ಆಯ್ಕೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದು ಬೇಡವೋ ಎಂದು ನಿರ್ಣಾಯಕ್ಕೆ ಬಂದಂತಾಗಿದೆ.
ಕಾಂಗ್ರೆಸ್ ಪಕ್ಷ ಇನ್ನೊಬ್ಬರ ಮೇಲೆ ಆರೋಪಗಳು ಮಾಡಿ ಜನರ ಮತವನ್ನು ಪಡೆಯುತ್ತೇವೆ ಎನ್ನುವುದು ಕನಸಿನ ಮಾತು, ಯಾವುದೋ ಸಮೀಕ್ಷೆಯಲ್ಲಿ ನಾವು ಮುಂದಿದ್ದೇವೆ ಎಂದು ಎನ್ನುವ ಹುಂಬುತನವನ್ನು ಬಿಟ್ಟು ಕ್ಷೇತ್ರದ ಜನರ ಸಂಪರ್ಕಕ್ಕೆ ಬನ್ನಿ ಅದು ಬಿಟ್ಟು ರಾಯಚೂರಿನಿಂದ ಆಗಮಿಸಿ ಮಾನವಿ ಪಟ್ಟಣದಲ್ಲಿ ಮಾತ್ರ ಯಾರಿಗೂ ಮಾಹಿತಿ ನೀಡದೆ ಮುಖಂಡರೊಟ್ಟಿಗೆ ಚರ್ಚೆ ಮಾಡಿ ನಾವು ಗೆಲ್ಲುತ್ತೇವೆ ಎಂದುಕೊಳ್ಳುವಂತಹ ಮನಸ್ಥಿತಿಯಿಂದ ಕಾಂಗ್ರೆಸ್ ನಾಯಕರು ಹೊರಬರಬೇಕಾಗಿದೆ.