ಮತದಾರರನ್ನು ಕೈಬೀಸಿ ಕರೆಯುತ್ತಿವೆ ಸಖಿ, ಥೀಮ್ ಬೂತ್‍ಗಳು:ಸುಣ್ಣ-ಬಣ್ಣಗಳಿಂದ ಸಿಂಗಾರಗೊಳ್ಳುತ್ತಿವೆ ವಿಶೇಷ ಮತಗಟ್ಟೆಗಳು

ಕಲಬುರಗಿ:ಮೇ.5: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ನಾನಾ ತರಹದ ಕಸರತ್ತು ಮಾಡುತ್ತಿದ್ದು, ಇದರ ಮುಂದುವರೆದ ಭಾಗವಾಗಿ ಮತದಾರರನ್ನು ಮತಗಟ್ಟೆಯತ್ತ ಆಕರ್ಷಿಸಲು ಜಿಲ್ಲೆಯಾದ್ಯಂತ ಸಖಿ, ಥೀಮ್, ಯುವ ಹಾಗೂ ವಿಶೇಷಚೇತನರನ್ನು ಗುರಿಯಾಗಿಸಿ ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಮತಗಟ್ಟೆಗಳಿಗೆ ಸುಣ್ಣ-ಬಣ್ಣದ ಕೆಲಸ ಭರದಿಂದ ಸಾಗಿದ್ದು, ಮೇ 7 ರಂದು ಮಧುವಣಗಿತ್ತಿಯಂತೆ ಸಿಂಗಾರಗೊಂಡು ಮತದಾರರನ್ನು ಆಕರ್ಷಿಸಲಿದೆ. ಪ್ರತಿಯೊಂದು ಬೂತ್ ತನ್ನದೆಯಾದ ವಿಶೇಷತೆಯನ್ನು ಹೊಂದಿದ್ದು, ಆಯಾ ವರ್ಗದ ಮತದಾರರನ್ನು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಪ್ರೋತ್ಸಾಹಿಸಲಿದೆ.

ಜಿಲ್ಲೆಯಲ್ಲಿ 72 ವಿಶೇಷ ಬೂತ್‍ಗಳು:

ಕಲಬುರಗಿ ಜಿಲ್ಲೆಯಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಬೂತ್, ತಲಾ ಒಂದು ಯುವ, ಪಿ.ಡಬ್ಲ್ಯೂ.ಡಿ. ಹಾಗೂ ಥೀಮ್ ಬೇಸ್ಡ್ ಬೂತ್ ಸ್ಥಾಪಿಸಲಾಗುತ್ತಿದೆ. ಅದರಂತೆ ಒಟ್ಟಾರೆ 45 ಸಖಿ ಪಿಂಕ್ ಬೂತ್, ತಲಾ 9 ಯುವ, ಥೀಮ್ ಹಾಗೂ ಪಿ.ಡಬ್ಲ್ಯೂ.ಡಿ. ಸೇರಿ ಒಟ್ಟಾರೆ 72 ಬೂತ್ ಮತದಾರರ ಸ್ನೇಹಿಯಾಗಿ ಸಿದ್ಧಗೊಳಿಸಲಾಗುತ್ತಿದೆ. ಮತಗಟ್ಟೆಗೆ ಬಂದು ಮತ ಚಲಾಯಿಸಲೆಂದು ಪ್ರೇರೇಪಿಸುವುದು ಇದರ ಉದ್ದೇಶ ಎನ್ನುತ್ತಾರೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್.

ಸಖಿ ಪಿಂಕ್ ಬೂತ್:

ಮಹಿಳಾ ಮತದಾರರೆ ಹೆಚ್ಚಿರುವ ಸಖಿ ಪಿಂಕ್ ಬೂತ್‍ನಲ್ಲಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕಿ, ಕಾವಲು ಸಿಬ್ಬಂದಿ ಎಲ್ಲರು ಮಹಿಳೆಯರೇ ಆಗಿರಲಿದ್ದಾರೆ. ಸಂಪೂರ್ಣ ಮತಗಟ್ಟೆ ಮಹಿಳಾ ಸಿಬ್ಬಂದಿಯಿಂದ ನಿರ್ವಹಣೆಗೆ ಒಳಪಟ್ಟಿದ್ದು, ಎಲ್ಲವು ಮಹಿಳಾಮಯವಾಗಿರಲಿದೆ. ಗುಲಾಬಿ ಬಣ್ಣದ ಸೀರೆಯಲ್ಲಿ ಮಹಿಳಾ ಸಿಬ್ಬಂದಿ ಕಂಗೊಳಿಸಿದರೆ, ಮತಗಟ್ಟೆ ಕಟ್ಟಡವು ಪಿಂಕ್ ಬಣ್ಣದಿಂದ ಕೂಡಿರಲಿದೆ.

ಯುವ ಬೂತ್:

ವಿಶೇಷವಾಗಿ ಮೊದಲನೇ ಬಾರಿಗೆ ಮತದ ಹಕ್ಕು ಚಲಾಯಿಸುವ ಯುವ ಮತದಾರರನ್ನು ಗುರಿಯಾಗಿಸಿ ಕ್ಷೇತ್ರಕ್ಕೊಂದು “ಯುವ ಬೂತ್” ಸ್ಥಾಪಿಸಲಾಗುತ್ತಿದ್ದು, ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಚುನಾವಣೆ ಮತ್ತು ಮತದ ಮಹತ್ವ ಅದರ ಪ್ರಕ್ರಿಯೆ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸುವುದೇ ಮತಗಟ್ಟೆಯ ಮುಖ್ಯ ಉದ್ದೇಶವಾಗಿದೆ.

ಪಿ.ಡಬ್ಲ್ಯೂ.ಡಿ. ಮತಗಟ್ಟೆ:

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅತೀ ಹೆಚ್ಚು ಅಂಗವಿಕಲರು ಇರುವಂತಹ ಪ್ರದೇಶದಲ್ಲಿ “ಪಿ.ಡಬ್ಲ್ಯೂ.ಡಿ.” ಮತಗಟ್ಟೆ ಸ್ಥಾಪಿಸಿ ಅಲ್ಲಿ ವಿಶೇಷ ಚೇತನರಿಗಾಗಿ ಮತ ಚಲಾಯಿಸಲು ಅನುಕೂಲವಾಗುವಂತೆ ರ್ಯಾಂಪ್, ವ್ಹೀಲ್ ಚೇರ್, ವೇಟಿಂಗ್, ಶಾಮಿಯಾನ ಹಾಕಲಾಗುತ್ತಿದೆ.

ಮಾದರಿ(ಥೀಮ್) ಮತಗಟ್ಟೆ:

ಇನ್ನು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಬಗ್ಗೆ ಪರಿಚಯ ನೀಡುವುದೇ ಈ ಮಾದರಿ (ಥೀಮ್) ಮತಗಟ್ಟೆ ಮುಖ್ಯ ಉದ್ದೇಶ. ಮತಕ್ಷೇತ್ರದ ವಿಶೇಷತೆ ಆ ಮತಗಟ್ಟೆಯ ಗೋಡೆ ಬರಹದಲ್ಲಿ ಪ್ರತಿಬಿಂಬವಾಗಲಿದೆ. ಈ ಮೂಲಕ ಸ್ಥಳೀಯ ವಿಶೇಷತೆಯನ್ನು ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಮತ ಚಲಾಯಿಸುವಂತೆ ಪ್ರೇರೇಪಿಸುವುದಾಗಿದೆ.

ಅಫಜಲಪೂರ ಕ್ಷೇತ್ರದ ಅಫಜಲಪೂರ ಟಿ.ಪಿ.ಎಸ್. ಮೀಟಿಂಗ್ ಹಾಲ್ ಮತಗಟ್ಟೆ ಸಂ.169ರಲ್ಲಿ ಜಿಲ್ಲೆಯ ಜೀವ ಜಲ ಭೀಮಾ ನದಿ, ಬ್ಯಾರೇಜ್ ಹಾಗೂ ಕಬ್ಬು, ಜೇವರ್ಗಿ ಮತಕ್ಷೇತ್ರದ ರಾಜವಾಳ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.169ರಲ್ಲಿ ಪ್ರಮುಖ ಕೃಷಿ ಬೆಳೆಗಳು, ಚಿತ್ತಾಪೂರ ಕ್ಷೇತ್ರದ ಗುಂಡಗುರ್ತಿ ಸರ್ಕಾರಿ ಎಂ.ಪಿ.ಎಸ್. ಶಾಲೆ ಮತಗಟ್ಟೆ ಸಂ.26ರಲ್ಲಿ ಐತಿಹಾಸಿಕ ಸನ್ನತ್ತಿ, ಸೇಡಂ ಕ್ಷೇತ್ರದ ಸೇಡಂ ಪಟ್ಟಣದ ವಿದ್ಯಾ ನಗರ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.112ರಲ್ಲಿ ಸಿಮೆಂಟ್ ಕಾರ್ಖಾನೆ, ಚಿಂಚೋಳಿ ಕ್ಷೇತ್ರದ ಗೋಟೂರ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.212ರಲ್ಲಿ ವನ್ಯಜೀವಿ ಅಭಯಾರಣ್ಯ, ಗುಲಬರ್ಗಾ ಗ್ರಾಮೀಣ ಕ್ಷೇತ್ರದ ಸಂಗೋಳಗಿ ಸ.ಹಿ.ಪ್ರಾ. ಶಾಲೆ ಮತಗಟ್ಟೆ ಸಂ.95ರಲ್ಲಿ ಕಮಲಾಪೂರದ ಕೆಂಬಾಳೆ ಕುರಿತು ಮಾಹಿತಿ ನೀಡುವ ಗೋಡೆ ಬರಹಗಳು ಮತಗಟ್ಟೆಯಲ್ಲಿ ಕಾಣಬಹುದಾಗಿದೆ.

ಅದೇ ರೀತಿ ಗುಲಬರ್ಗಾ ದಕ್ಷಿಣ ಕ್ಷೇತ್ರಕ್ಕೆ ಸೇರಿದ ಕಲಬುರಗಿ ನಗರದ ಜಿಲಾನಾಬಾದ ಪ್ರದೇಶದ ಶಾ ಜೀಲಾನಿ ನರ್ಸರಿ ಮತ್ತು ಪ್ರಾಥಮಿಕ ಶಾಲೆ ಮತಗಟ್ಟೆ ಸಂ.107ರಲ್ಲಿ ಪರಿಸರ ಉಳಿಸಿ ಜಾಗೃತಿ ಮುಡಿಸಲಾಗುತ್ತಿದೆ. ಗುಲಬರ್ಗಾ ಉತ್ತರಕ್ಕೆ ಸೇರಿದ ಕಲಬುರಗಿ ನಗರದ ಶಹಾಬಜಾರ ಪ್ರದೇಶದ ವಿವೇಕಾನಂದ ನಗರದಲ್ಲಿನ ಮಿಲೇನಿಯಂ ಆಂಗ್ಲ ಮಾಧ್ಯಮ ಶಾಲೆ ಮತಗಟ್ಟೆ ಸಂ.45 ರಲ್ಲಿ ಕಡಿಮೆ ಬಳಕೆ ಜೊತೆಗೆ ಮರು ಬಳಕೆ ಪರಿಕಲ್ಪನೆ ಸೃಷ್ಠಿಸಿದ್ದು, ಆಳಂದ ಕ್ಷೇತ್ರದ ಮೋಘಾ(ಕೆ) ಸ.ಹಿ.ಪ್ರಾ.ಶಾಲೆ ಮತಗಟ್ಟೆ ಸಂ.186 ರಲ್ಲಿ ಜಿಲ್ಲೆಯ ಪ್ರಮುಖ ಬೆಳೆ ತೊಗರಿ ಉತ್ಪನ್ನ ಕುರಿತು ಚಿತ್ರ ಬಿಡಿಸ್ದದು, ವಿಷಯಾಧಾರಿತ 9 ಥೀಮ್ ಬೂತ್ ಪ್ರಮುಖ ಆಕರ್ಷಣಿಯ ಕೇಂದ್ರವಾಗಿ ಮಾರ್ಪಟ್ಟಿವೆ.