ಮತದಾರಪಟ್ಟಿ ಪರಿಷ್ಕರಣೆ: ಪ್ರಗತಿ ಪರಿಶೀಲನೆ

ಲಕ್ಷ್ಮೇಶ್ವರ,ನ13: ತಾಲೂಕಿನಾದ್ಯಂತ ನಡೆಯುತ್ತಿರುವ ಮತದಾರಪಟ್ಟಿ ಪರಿಷ್ಕರಣೆ ಕಾರ್ಯದ ಸ್ಥಳಕ್ಕೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಹಾಗೂ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಬೇಟಿ ನೀಡಿ ಬಿಎಲ್‍ಓಗಳ ಕಾರ್ಯವೈಖರಿ ಪ್ರಗತಿ ಪರಿಶೀಲಿಸಿ ಆದಷ್ಟು ಬೇಗ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ತಾಲೂಕಿನ ಗೊಜನೂರು, ಲಕ್ಷ್ಮೇಶ್ವರದ ಕೇಂದ್ರಗಳಲ್ಲಿ ನಡೆಯುತ್ತಿರುವ ಮತದಾರರ ಪರಿಷ್ಕರಣೆ ಕಾರ್ಯವನ್ನು ಪರಿವೀಕ್ಷಿಸಿದರು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಮತದಾರರ ಮಾಹಿತಿ ಪರಿಷ್ಕರಣೆ ಕಾರ್ಯ ನಡೆಯುತ್ತಿದೆ. 18 ವರ್ಷ ಮೇಲ್ಪಟ್ಟ ಯುವಕರು,ಯುವತಿಯರು ತಪ್ಪದೇ ಹೆಸರು ನೋಂದಾಯಿಸಿಕೊಳ್ಳಬೇಕು. ಮತದಾರರು ತಮ್ಮ ಹೆಸರು, ಮಾಹಿತಿ ಪರಿಶೀಲನೆ ಮಾಡಿಕೊಳ್ಳುವದು, ವಿಳಾಸ ಬದಲಾವಣೆ, ತಿದ್ದುಪಡಿ, ಪೋತಿಯಾದವರ ಹೆಸರು ತೆಗೆಸುವ ಕಾರ್ಯ ಮಾಡಬೇಕು. ನಮೂನೆ 6ರ ಮೂಲಕ ಹೆಸರು ನೋಂದಾಯಿಸಬೇಕು. ಮತದಾರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ 7, ತಿದ್ದುಪಡಿಗಾಗಿ ನಮೂನೆ 8 ಪಾರ್ಮ ಬಳಸಬೇಕು ಎಂದರು.
ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರೀಷ್ಕರಣೆ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ. ಈಗಾಗಲೇ ಎಲ್ಲ ಕಡೆಗಳಲ್ಲಿ ಜಾಗೃತಿ ಜಾಥಾಗಳನ್ನು ಕೈಗೊಳ್ಳಲಾಗಿದೆ. ಮತದಾರರ ಯಾದಿಯಲ್ಲಿ ಎರಡು ಕಡೆಗಳಲ್ಲಿ ಹೆಸರು ಇರುವದು ಕಾನೂನು ಬದ್ಧವಾಗಿ ಅಪರಾಧವಾಗಿದೆ. ಅಂತವರು ಕೂಡಲೇ ತಮ್ಮ ಹೆಸರುಗಳನ್ನು ಒಂದು ಕಡೆಗಳಲ್ಲಿ ತೆಗೆದು ಹಾಕುವದಕ್ಕೆ ಮಾಹಿತಿ ನೀಡಬೇಕು. ಈ ಕುರಿತಂತೆ ಬಿ.ಎಲ್.ಓಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದರೆ ಇದಕ್ಕೆ ಇಬ್ಬರು ಹೊಣೆಗಾರರಾಗುತ್ತಾರೆ ಎಂದರು.
ಈ ವೇಳೆ ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ, ತಹಸೀಲ್ದಾರ ಪರಶುರಾಮ ಸತ್ತಿಗೇರಿ, ಕಂದಾಯ ನಿರೀಕ್ಷಕ ಬಿ.ಎಂ.ಕಾತ್ರಾಳ, ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ, ಹನುಮಂತಪ್ಪ ನಂದೆಣ್ಣವರ, ಮಂಜುನಾಥ ಮುದಗಲ್, ಹನಮಂತಪ್ಪ ನಂದೆಣ್ಣವರ, ಶಿವಣ್ಣ ಮ್ಯಾಗೇರಿ ಮುಂತಾದವರಿದ್ದರು.