ಮತದಾನ ಸುಭದ್ರ ಸರ್ಕಾರ ರಚನೆಗೆ ಪ್ರಮುಖ ಪಾತ್ರ ವಹಿಸುತ್ತದೆ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.05: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎಂಬುದು ಒಂದು ದೇಶದ ಅಥವಾ ರಾಜ್ಯದ ಸುಭದ್ರ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಪುರಸಭಾ ಮುಖ್ಯಾಧಿಕಾರಿ ಸತೀಶ್ ತಿಳಿಸಿದರು.
ಅವರು ಪಟ್ಟಣದ ಪುರಸಭೆಯ ಆವರಣದಲ್ಲಿ ಮತದಾನದ ಜಾಗೃತಿಗಾಗಿ ಏರ್ಪಡಿಸಿದ್ದ ಬೈಕ್ ರ?ಯಾಲಿಯನ್ನು ಉಧ್ಘಾಟಿಸಿ ಮಾತನಾಡಿದರು.
ಪಟ್ಟಣದ ವಿವಿಧ ಅಂಗಡಿಗಳು, ಬಡಾವಣೆಗಳು, ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಬೈಕಿನಲ್ಲಿ ತೆರಳಿದ ಪುರಸಭಾ ಅಧಿಕಾರಿಗಳ ತಂಡ ಮತದಾರರಿಗೆ ಜಾಗೃತಿ ಮೂಡಿಸಿ ಮಾತನಾಡಿ ಒಬ್ಬ ಸಾಮಾನ್ಯ ವ್ಯಕ್ತಿಯೂ ಪ್ರಜಾಪ್ರಭುತ್ವ ಮಾದರಿಯ ದೇಶದಲ್ಲಿ ಮುಖ್ಯನಾಗಿದ್ದು ಅವನ ಒಂದು ಮತ ಒಬ್ಬ ಅಭ್ಯರ್ಥಿಯ ಹಣೆಬರಹವನ್ನು ಬದಲಿಸಬಲ್ಲದು. ಆದ್ದರಿಂದ ಸುರಕ್ಷಿತ ಹಾಗೂ ಸುಭದ್ರ ಸರ್ಕಾರದ ರಚನೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ತನ್ನ ಅಮೂಲ್ಯವಾದ ಮತವನ್ನು ಚಲಾಯಿಸುವ ಮೂಲಕ ಪ್ರಜಾಪ್ರಭೂತ್ವದ ಹಬ್ಬವನ್ನು ಆಚರಿಸಬೇಕು.
ಇದೇ ತಿಂಗಳು 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡಬೇಕು. ಹಿರಿಯ ಹಾಗೂ ವಯಸ್ಸಾದ ಮತದಾರರಿಗಾಗಿ ಮನೆ ಬಾಗಿಲಿಗೇ ಬಂದು ಮತದಾನ ಮಾಡಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಲಾಗಿದ್ದು ಅಂದು ಏನೇ ಕೆಲಸ ಕಾರ್ಯಗಳಿದ್ದರೂ ಅವುಗಳನ್ನು ಬದಿಗೊತ್ತಿ ನಿಮ್ಮ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ರಚನೆಯಲ್ಲಿ ತಮ್ಮ ಕೊಡುಗೆ ನೀಡಬೇಕು. ಸಂವಿಧಾನ 18 ವರ್ಷ ತುಂಬಿದ ಭಾರತದ ಎಲ್ಲಾ ಸ್ತ್ರೀಯರು ಪುರುಷರಿಗೂ ಮತದಾನದ ಹಕ್ಕನ್ನು ನೀಡಿದ್ದು ಯುವ ಮತದಾರರು ತಮಗೆ ದೊರಕಿರುವ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಕಂದಾಯಾಧಿಕಾರಿ ರವಿಕುಮಾರ್, ಕಛೇರಿ ವ್ಯವಸ್ಥಾಪಕಿ ಕಾಂಚನ, ಕರ ವಸೂಲಿಗಾರರಾದ ಪುಟ್ಟಸ್ವಾಮಿ, ದೇವರಾಜು, ಸಿಬ್ಬಂದಿಗಳಾದ ಮಂಟೆಮಂಜು, ಮೂರ್ತಿ, ನರಸಿಂಹನಾಯಕ ಸೇರಿದಂತೆ ಹಲವರು ಹಾಜರಿದ್ದರು.