
ಕೋಲಾರ,ಜು.೧೮- ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳ್ಳಲು ಚುನಾವಣೆ,ಮತದಾನದ ಕುರಿತಂತೆ ಮುಂದಿನ ದೇಶದ ಭವಿಷ್ಯವಾದ ಮಕ್ಕಳಿಗೆ ಶಾಲಾ ಹಂತದಲ್ಲೇ ಅರಿವು ಮೂಡಿಸುವ ಅಗತ್ಯವಿದೆ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಪ್ರಭಾರಿ ಮುಖ್ಯಶಿಕ್ಷಕಿ ಸಿದ್ದೇಶ್ವರಿ ಹೇಳಿದರು.
ತಾಲ್ಲೂಕಿನ ಬೀರೇಶ್ವರ ಶಾಲೆ, ತ್ಯಾವನಹಳ್ಳಿ ಮತ್ತು ಅರಾಭಿಕೊತ್ತನೂರು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್‌ನಿಂದ ಸ್ವೀಪ್ ಅಡಿಯಲ್ಲಿ ಹಮ್ಮಿಕೊಂಡಿದ್ದ ಮತದಾನದ ಸಾಕ್ಷರತೆ ಕುರಿತ ಚಿತ್ರಪ್ರದರ್ಶನ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಲು ಮತದಾರರಲ್ಲಿ ಮೊದಲು ಜಾಗೃತಿ ಬರಬೇಕಿದೆ, ಹಣ,ಆಮಿಷಗಳಿಗೆ ಬಲಿಯಾಗಿ ಮತ ಚಲಾವಣೆ ತಪ್ಪು ಎಂಬ ಭಾವನೆ ಬಲಗೊಳ್ಳಬೇಕು, ಮತದಾನ ನಮ್ಮ ಪವಿತ್ರ ಕರ್ತವ್ಯ ಎಂಬ ಭಾವನೆ ಮೂಡಿಸಬೇಕು ಎಂದರು.
ಈ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಿದಲ್ಲಿ ಅವರೂ ಮುಂದಿನ ಮತದಾರರಾಗಿರುವುದರಿಂದ ಸಮಾಜದಲ್ಲೂ ಜಾಗೃತಿ ತರಲು ಸಹಕಾರಿಯಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂಬ ಅರಿವನ್ನು ನಿಮ್ಮ ಪೋಷಕರಿಗೂ ನೀಡಿ ಎಂದು ಕಿವಿಮಾತು ಎಂದರು.
ಮತದಾನದಿಂದ ದೂರ ಉಳಿಯುವವರ ಸಂಖ್ಯೆ ಹೆಚ್ಚುತ್ತಿದೆ, ಚುನಾವಣಾ ಆಯೋಗ ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿಸಲು ಅನೇಕ ಅರಿವು ಕಾರ್ಯಕ್ರಮ ನಡೆಸುತ್ತಿದ್ದರೂ ಜನತೆ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದ ಅವರು, ಮತದಾನದ ದಿನದಂದು ರಜೆ ಸಿಕ್ಕಿತೆಂದು ಮತ ಚಲಾಯಿಸದೇ ಪ್ರವಾಸ ಹೊರಡುವ ವಿದ್ಯಾವಂತರೇ ಮತದಾನದಿಂದ ದೂರ ಉಳಿಯುವ ತಪ್ಪು ಮಾಡುತ್ತಿರುವುದು ವಿಷಾದದ ಸಂಗತಿ ಎಂದು ತಿಳಿಸಿದರು..
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಸುಗುಣಾ, ಕೆ.ಲೀಲಾ, ಫರೀದಾ, ರಮಾದೇವಿ, ಡಿ.ಚಂದ್ರಶೇಖರ್, ತ್ಯಾವನಹಳ್ಳಿ ಶಾಲೆ ಶಿಕ್ಷಕ ಕುಪ್ಪಯ್ಯ, ಬೀರೇಶ್ವರ ಶಾಲೆಯ ಶಿಕ್ಷಕಿ ಶಿಲ್ಪಾ ಮತ್ತಿತರರು ಹಾಜರಿದ್ದರು.