ಮತದಾನ ಸಂವಿಧಾನ ಹಕ್ಕು, ಚಲಾವಣೆ ನಮ್ಮ ಜವಾಬ್ದಾರಿ

ಲಕ್ಷ್ಮೇಶ್ವರ,ಏ 14: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೆ ತಮ್ಮ ಪ್ರಭುಗಳನ್ನು ಆಯ್ಕೆ ಮಾಡಲು ಅವಕಾಶ ಕಲ್ಪಿಸಿದೆ. ಆದ್ದರಿಂದ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಎಂದು ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ. ಬಡಿಗೇರ ಹೇಳಿದರು.

ತಾಲೂಕಿನ ಯಳವತ್ತಿ, ಮಾಢಳ್ಳಿ ಗ್ರಾಮ ಪಂಚಾಯತಿಯ ಯತ್ನಳ್ಳಿ ಗ್ರಾಮದಲ್ಲಿಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಬದು ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೇ 10 ರಂದು ವಿಧಾನಸಭೆ ಚುನಾವಣೆಗೆ ಮತದಾನಕ್ಕೆ ನಿಗದಿ ಪಡಿಸಲಾಗಿದೆ. ಮತದಾನಕ್ಕೆ ಇನ್ನೂ 27 ದಿನಗಳಿವೆ. ಶೇ.100ರಷ್ಟು ಮತದಾನ ಚಲಾಯಿಸುವುದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ಆದ್ದರಿಂದ ತಾಲೂಕು ವ್ಯಾಪ್ತಿಯಲ್ಲಿಯ ಗ್ರಾಮೀಣ ಪ್ರದೇಶದಲ್ಲಿಯ ಉದ್ಯೋಗ ಖಾತ್ರಿ ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರಣೆ ನೀಡುವ ಕಾರ್ಯ ಮಾಡುತಿದ್ದೇವೆ. ಪ್ರತಿದಿನಕ್ಕೆ 316 ರೂ. ಕೂಲಿ ಮೊತ್ತ ಹಾಗೂ ವರ್ಷದಲ್ಲಿ 100 ದಿನ ಕೆಲಸ ಪಡೆಯ ಬಹುದಾಗಿದೆ. ಈ ಬೇಸಿಗೆ ಅವಧಿಯಲ್ಲಿ ಹೆಚ್ಚು ಕೆಲಸ ಒದಗಿಸಲು ಜಲ ಸಂಜೀವಿನಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ (ಗ್ರಾ.ಉ.) ಕೃಷ್ಣ ಧರ್ಮರ ಮಾತನಾಡಿ, ಮತದಾನ ಮಾಡುವಾಗ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಮ್ಮ ದೇಶ, ನೆಲ, ಜನರ ರಕ್ಷಣೆ ಮಾಡುವ ಬದ್ಧತೆ ಇರುವವರಿಗೆ ಮತ ಚಲಾಯಿಸಬೇಕು. ವಿಕಲಚೇತನರು, 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಅಂಚೆ ವ್ಯವಸ್ಥೆಯ ಮೂಲಕ ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ 8ಸಾವಿರಕ್ಕೂ ಹೆಚ್ಚು ಕೂಲಿಕಾರ್ಮಿಕರು ನಿತ್ಯ ಕೆಲಸದಲ್ಲಿ ತೊಡಗಿದ್ದಾರೆ. ನಿಗದಿತ ಸಮಯಕ್ಕೆ ಕೂಲಿ ಪಾವತಿ ವ್ಯವಸ್ಥೆಯ ಮೇಲೆ ನಿಗಾವಹಿಸಲಾಗಿದೆ ಎಂದು ತಿಳಿಸಿದರು.
ಮಾಢಳ್ಳಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಮಲ್ಲೂರ, ತಾಪಂ ಐಇಸಿ ಸಂಯೋಜಕ ವಿರೇಶ ಬಸನಗೌಡ್ರ ಅವರು ಕಡ್ಡಾಯ ಮತದಾನ ಮಾಡುವಂತೆ ಮತದಾರರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಯಳವತ್ತಿ ಗ್ರಾಪಂ ಕಾರ್ಯದರ್ಶಿ ವೈ.ಬಿ. ಮಾದರ, ಟಿಎಂಐಎಸ್ ಚಂದ್ರಶೇಖರ ಹಳ್ಳಿ, ಟಿಸಿ ಅರುಣಕುಮಾರ ತಂಬ್ರಳ್ಳಿ, ಟಿಎಇ ಪ್ರದೀಪ ನರೇಗಲ್ಲ, ಲಿಂಗರಾಜ ಅರಿಷಿಣದ, ಬಿಎಫ್‍ಟಿ ಸತೀಶ ಅರಿಷಿಣದ, ಗ್ರಾಪಂ ಸಿಬ್ಬಂದಿಯಾದ ಬಸವರಾಜ ಅರ್ಕಸಾಲಿ, ಪ್ರಕಾಶ ಅಂಗಡಿ, ಜಿಕೆಎಂ ನಿರ್ಮಲಾ ಚಿಣಗಿ ಇತರರಿದ್ದರು.