ಮತದಾನ ಶಾಂತಿಯುತ

(ಸಂಜೆವಾಣಿ ಪ್ರತಿನಿಧಿಯಿಂದ)
ನಗರದ ಶ್ರೀರಾಮಪುರದ ಲಿಟಲ್ ಫ್ಲವರ್ ಶಾಲೆ ಮುಂಭಾಗ ಮತ ಚಲಾಯಿಸಲು ಗುರುತಿನ ಚೀಟಿಯೊಂದಿಗೆ ಸಾಲಾಗಿ ನಿಂತಿರುವ ಮತದಾರರು.

ಬೆಂಗಳೂರು,ಏ.೨೬:ರಾಜ್ಯದ ೧೪ ಲೋಕಸಭಾ ಕ್ಷೇತ್ರಗಳಿಗೆ ಇಂದು ನಡೆದಿರುವ ಮೊದಲ ಹಂತದ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಮತಯಂತ್ರ ದೋಷ, ವಿವಿ ಪ್ಯಾಡ್ ಸಮಸ್ಯೆಗಳಂತ ಒಂದೆರೆಡು ಸಣ್ಣ ಪುಟ್ಟ ಘಟನೆಗಳನ್ನೊರತುಪಡಿಸಿದರೆ ಮತದಾನ ಸುಗಮವಾಗಿ ಸಾಗಿದೆ.
ರಾಜ್ಯದ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ,ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ,ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದ್ದು, ಎಲ್ಲೆಡೆ ಮತದಾನ ಚುರುಕಿನಿಂದ ಸಾಗಿದೆ. ಬಹುತೇಕ ಕಡೆ ಮತದಾರರು ಉತ್ಸಾಹದಿಂದ ಮತ ಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮಧ್ಯಾಹ್ನದವರೆಗೆ ಸರಾಸರಿ ಶೇ. ೪೦ ರಿಂದ ೪೫ ರಷ್ಟು ಮತದಾನವಾಗಿದೆ.
ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ತಲಾ ಒಂದು ಮತಗಟ್ಟೆಗಳಲ್ಲಿ ಮತಯಂತ್ರ ದೋಷ, ವಿವಿ ಪ್ಯಾಡ್ ಸಮಸ್ಯೆ ಕಾಣಿಸಿಕೊಂಡಿದ್ದು, ಮತಯಂತ್ರಗಳನ್ನು ಬದಲಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಇಲ್ಲಿ ಮತದಾನ ಸ್ವಲ್ಪ ತಡವಾಗಿ ಆರಂಭವಾಯಿತು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಎಲ್ಲ ವ್ಯವಸ್ಥೆ ಮಾಡಿದ್ದು, ಮತದಾರರು ನಿರ್ಭೀತಿಯಿಂದ ಮತಗಟ್ಟೆಗೆ ಬಂದು ಮತ ಹಾಕಿದ್ದು ರಾಜ್ಯದ ಎಲ್ಲೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಹಾಸನ ನಗರದ ಸಂತೆಪೇಟೆಯ ಮತಗಟ್ಟೆ ಸಂಖ್ಯೆ ೧೮೯ರಲ್ಲಿ ಮತಯಂತ್ರದ ದೋಷದಿಂದ ಮತದಾನ ಒಂದು ಗಂಟೆ ತಡವಾಗಿ ಆರಂಭವಾಯಿತು. ಹಾಗೆಯೇ ಚಿಕ್ಕಮಗಳೂರಿನ ಅರೆನೂರು ಗ್ರಾಮದಲ್ಲೂ ಮತಯಂತ್ರ ತಾಂತ್ರಿಕ ದೋಷದಿಂದ ಮತದಾನ ತಡವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಮತಗಟ್ಟೆಯಲ್ಲಿ ಮತಯಂತ್ರ ದೋಷ ಕಂಡು ಬಂದು ಮತದಾನಕ್ಕೆ ಆರಂಭದ ಅಡ್ಡಿಯಾಯಿತು. ಮತಯಂತ್ರವನ್ನು ಸರಿಪಡಿಸಿದ ನಂತರ ಮತದಾನ ಆರಂಭವಾಯಿತು.
ರಾಜ್ಯದ ಎಲ್ಲ ೧೪ ಕ್ಷೇತ್ರಗಳಲ್ಲೂ ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು, ಹಲವೆಡೆ ಬೆಳ್ಳ ಬೆಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತು ಮತ ಹಾಕಿದರು.ಬೆಂಗಳೂರಿನಲ್ಲೂ ಬೆಳಿಗ್ಗೆಯೇ ಮತ ಹಾಕಲು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬಂದಿದ್ದು, ಗಮನ
ಸೆಳೆಯಿತು. ಸಂಜೆ ೬ರ ವರೆಗೂ ಮತ ಹಾಕಲು ಅವಕಾಶವಿದೆ. ಹಲವೆಡೆ ಹಿರಿಯ ನಾಗರಿಕರು ಉತ್ಸಾಹದಿಂದ ಮತ ಹಾಕಿದ್ದು, ವಿಶೇಷ ಚೇತನರೂ ಸಹ ಗಾಲಿ ಕುರ್ಚಿಯಲ್ಲಿ ಬಂದು ಮತ ಹಾಕಿದ ದೃಶ್ಯ ಕಂಡು ಬಂತು.

ಭವಿಷ್ಯ ನಿರ್ಧಾರ
ಇಂದು ೧೪ ಲೋಕಸಭಾ ಕ್ಷೇತ್ರಗಳಲ್ಲಿ ನಡೆದಿರುವ ಮೊದಲ ಹಂತದ ಚುನಾವಣೆಯಲ್ಲಿ ಒಟ್ಟಾರೆ ೨೪೭ ಅಭ್ಯರ್ಥಿಗಳು ಕಣದಲ್ಲಿದ್ದು, ಇವರೆಲ್ಲರ ಭವಿಷ್ಯ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿದೆ.ಮೊದಲ ಹಂತದ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಮೈಸೂರು ರಾಜವಂಶಸ್ಥ ಯಧುವೀರ ದತ್ತ ಒಡೆಯರ್, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಹೋದರ, ಹಾಲಿ ಸಂಸದ ಡಿ.ಕೆ ಸುರೇಶ್,ಮಾಜಿ ಸಚಿವರಾದ ವಿ. ಸೋಮಣ್ಣ, ಗೋವಿಂದಕಾರಜೋಳ, ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳ ರಾಜಕೀಯ ಭವಿಷ್ಯವನ್ನು ಮತದಾರ ವಿದ್ಯುನ್ಮಾನ ಮತಯಂತ್ರದ ಬಟನ್ ಒತ್ತುವ ಮೂಲಕ ನಿರ್ಧರಿಸಿದ್ದು, ಮತದಾರರ ತೀರ್ಮಾನ ಏನು ಎಂಬುದು ಜೂನ್ ೪ ರಂದು ನಡೆಯುವ ಮತ ಎಣಿಕೆಯಲ್ಲಿ ಬಹಿರಂಗವಾಗಲಿದೆ.ಮೊದಲ ಹಂತದ ೧೪ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲ ೧೪ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಬಿಜೆಪಿ ೧೧ ಕ್ಷೇತ್ರಗಳಿಂದ, ಜೆಡಿಎಸ್ ೩ ಕ್ಷೇತ್ರಗಳಲ್ಲಿ ಕಣದಲ್ಲಿದ್ದು, ಎಲ್ಲೆಡೆ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.
ಬಿಗಿ ಬಂದೋಬಸ್ತ್
ಇಂದಿನ ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ೫೦ ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದ್ದು, ಮತದಾನಕ್ಕಾಗಿ ೧೪ ಕ್ಷೇತ್ರಗಳಲ್ಲಿ ಒಟ್ಟಾರೆ ೩೦,೪೦೨ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮಹಿಳೆಯರಿಗಾಗಿ ಪಿಂಕ್‌ಬೂತ್, ವಿಶೇಷ ಚೇತನರಿಗೂ ವಿಶೇಷ ಮತಗಟ್ಟೆಗಳನ್ನು ಕೆಲವೆಡೆ ಸ್ಥಾಪಿಸಲಾಗಿದೆ.
ಸುಮಾರು ೧೯,೭೦೦ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ಮಾಡಲಾಗಿದ್ದು, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಗಣ್ಯರ ಮತದಾನ
ಇಂದು ನಡೆದಿರುವ ಮೊದಲನೇ ಹಂತದ ಚುನಾವಣೆಯ ಮತದಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ.ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕೇಂದ್ರದ ಸಚಿವರುಗಳಾದ ನಿರ್ಮಲಾಸೀತಾರಾಮನ್,ಶೋಭಾಕರಂದ್ಲಾಜೆ, ಸೇರಿದಂತೆ ಹಲವು ಗಣ್ಯರು ತಮ್ಮ ಮತ ಚಲಾಯಿಸಿದರು.ಹಾಗೆಯೇ ಐಟಿ ಉದ್ಯಮಿ ನಾರಾಯಣಮೂರ್ತಿ, ಅವರ ಪತ್ನಿ ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ವಿ. ಸೋಮಣ್ಣ, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ್, ಜಮೀರ್‌ಅಹ್ಮದ್‌ಖಾನ್, ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ಇವರುಗಳು ತಮ್ಮ ಕುಟುಂಬಸ್ಥರ ಜತೆ ಮತ ಚಲಾಯಿಸಿದರು.ಈ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವ ಪಿ.ಸಿ ಮೋಹನ್, ತೇಜಸ್ವಿ ಸೂರ್ಯ, ಸೌಮ್ಯರೆಡ್ಡಿ, ಅಮಾನ್‌ಉಲ್ಲಾಖಾನ್, ಮುದ್ದಹನುಮೇಗೌಡ, ಮಲ್ಲೇಶ್‌ಬಾಬು, ವೆಂಕರಮಣೇಗೌಡ (ಸ್ಟಾರ್ ಚಂದ್ರು), ಎಂ.ಲಕ್ಷ್ಮಣ್, ಪ್ರಜ್ವಲ್‌ರೇವಣ್ಣ, ಶ್ರೇಯಸ್ ಪಟೇಲ್, ಬಿ.ಎನ್ ಚಂದ್ರಪ್ಪ, ಕ್ಯಾಪ್ಟನ್ ಬ್ರಿಜೇಶ್‌ಚೌm, ಪದ್ಮರಾಜ್, ಕೋಟಾಶ್ರೀನಿವಾಸ ಪೂಜಾರಿ, ಜಯಪ್ರಕಾಶ್ ಹೆಗಡೆ,ಸುನಿಲ್‌ಬೋಸ್,ಬಾಲರಾಜು, ಡಾ. ಸಿ.ಎನ್ ಮಂಜುನಾಥ್, ಪ್ರೊ, ರಾಜೀವ್‌ಗೌಡ,ರಕ್ಷಾರಾಮಯ್ಯ, ಕೆ.ವಿ ಗೌತಮ್ ಇವರುಗಳು ತಮ್ಮ ಮತ ಚಲಾಯಿಸಿದರು.
ಪೊಲೀಸ್ ಆಯುಕ್ತ ದಯಾನಂದ್, ಮಾಜಿ ಸಚಿವ ಕೆ. ಗೋಪಾಲಯ್ಯ, ಡಾ. ಸಿ.ಎನ್ ಅಶ್ವತ್ಥನಾರಾಯಣ ಇವರುಗಳು ತಮ್ಮ ಕುಟುಂಬಸ್ಥರೊಂದಿಗೆ ಬಂದು ಮತ ಹಾಕಿದರು. ಕೇಂದ್ರದ ಮಾಜಿ ಸಚಿವ ರೆಹಮಾನ್‌ಖಾನ್ ತಮ್ಮ ಕುಟುಂಬಸ್ಥರೊಂದಿಗೆ ಬಂದು ಮತ ಹಾಕಿದರು.
ಸ್ವಾಮೀಜಿಗಳ ಮತದಾನ
ಈ ಚುನಾವಣೆಯಲ್ಲಿ ಸುತ್ತೂರು ಶ್ರೀಗಳಾದ ದೇಶೀಕೇಂದ್ರ ಸ್ವಾಮೀಜಿಗಳು, ಸಿದ್ದಗಂಗಾಮಠಾಧೀಶರಾದ ಸಿದ್ದಲಿಂಗಸ್ವಾಮೀಜಿಗಳು, ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದನಾಥ ಸ್ವಾಮೀಜಿ, ರಂಭಾಪುರಿ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಮತ ಹಾಕಿದರು.

ಚುನಾವಣೆ ಬಹಿಷ್ಕಾರ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೋರನಹಳ್ಳಿ ಗ್ರಾಮಸ್ಥರು ಕೆ.ಸಿ ವ್ಯಾಲಿ ನೀರು ಗ್ರಾಮದ ಕೆರೆಗೆ ಹರಿಸಬೇಕು ಎಂದು ಆಗ್ರಹಿಸಿ ಮತದಾನ ಬಹಿಷ್ಕಾರ ಮಾಡಿದ್ದು, ಸ್ಥಳೀಯ ಶಾಸಕರು ಹಾಗೂ ಸಹಶೀಲ್ದಾರ್ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.