
ಮೈಸೂರು.ಏ.30:- ನೈತಿಕ ಮತದಾನ ನಮ್ಮೆಲ್ಲರ ಹಕ್ಕು ಹಾಗೂ ಜವಾಬ್ದಾರಿ. ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.
ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023ರ ಅಂಗವಾಗಿ ನಮ್ಮ ನಡೆ ಮತಗಟ್ಟೆಯ ಕಡೆ ಎಂಬ ಧ್ಯೇಯದೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಒಂಟಿಕೊಪ್ಪಲಿನ ಮಾತೃ ಮಂಡಳಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಧ್ವಜಾರೋಹಣ, ಪ್ರತಿಜ್ಞಾ ವಿಧಿ ಬೋಧನೆ ಹಾಗೂ ಮತದಾನ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 18 ವಯಸ್ಸು ತುಂಬಿದ ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಹಾಗೂ ನೈತಿಕ ಮತದಾನ ನಡೆಯುವಂತೆ ಇಡೀ ರಾಜ್ಯದಾದ್ಯಂತ ನಮ್ಮ ನಡೆ ಮತಗಟ್ಟೆಯ ಕಡೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಗ್ರಾಮೀಣ ಪ್ರದೇಶಗಳಿಗೆ ಹೋಲಿಕೆ ಮಾಡಿದರೆ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾಗುತ್ತಿದ್ದು, ಸುಶಿಕ್ಷಿತರಲ್ಲಿಯೇ ಮತದಾನದ ಮಹತ್ವದ ಬಗ್ಗೆ ಅರಿವಿಲ್ಲದಿರುವುದು ಹಾಗೂ ಮತದಾನ ಮಾಡುವಲ್ಲಿ ನಿರ್ಲಕ್ಷ್ಯವಿರುವುದು ಸರಿಯಲ್ಲ. ಮೈಸೂರು ಜಿಲ್ಲೆಯಲ್ಲಿ 20095 ಮತಗಟ್ಟೆಗಳಿದ್ದು ಎಲ್ಲ ಮತಗಟ್ಟೆಗಳಲ್ಲೂ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಹತ್ತಿರದ ನಿಮ್ಮ ಮತಗಟ್ಟೆಗೆ ಭೇಟಿ ನೀಡಿ ಅಲ್ಲಿರುವ ಸೌಲಭ್ಯಗಳನ್ನು ನೀವು ಪರೀಕ್ಷಿಸಬಹುದು ಮತ್ತು ನೀವೇ ಚುನಾವಣಾ ರಾಯಭಾರಿಯಾಗಿ ಮತ್ತಷ್ಟು ಮತದಾರರಿಗೆ ಮತದಾನದ ಮಹತ್ವವನ್ನು ಸಾರಬಹುದು ಎಂದರು.
ಇನ್ನೂ ಕೆಲಭಾಗದಲ್ಲಿ ವಾಸಿಸುವ ಮಧ್ಯಮ ಸಂಪರ್ಕವಿಲ್ಲದ ಜನರಿಗೆ ಚುನಾವಣೆಯ ದಿನಾಂಕ ಹಾಗೂ ಚುನಾವಣಾ ಮಹತ್ವ ತಿಳಿದಿರುವುದಿಲ್ಲ. ಅಂತಹ ಜನರಿಗೆ ಮಾಹಿತಿ ತಲುಪಿಸುವುದು ಕೇವಲ ಜಿಲ್ಲಾಡಳಿತದ ಜವಾಬ್ದಾರಿ ಮಾತ್ರವಲ್ಲ ಇದರಲ್ಲಿ ಸಮುದಾಯದವರ ಪಾತ್ರವೂ ಇದೆ. ನಗರದ ಕೆಲವು ಭಾಗಗಳಲ್ಲಿ ಶೇ. 40 ಅಥವಾ 50ರಷ್ಟು ಮಾತ್ರ ಮತದಾನವಾಗುತ್ತದೆ. ಮತದಾನ ಮಾಡುವಲ್ಲಿ ಅಸಡ್ಡೆ ಹಾಗೂ ಬೇಜವಾಬ್ದಾರಿ ಬೇಡ. ಅಧಿಕಾರಿಗಳೆಲ್ಲರೂ ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅನೈತಿಕ ಪ್ರಚಾರಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಜಾತಿ, ಮತ, ಧರ್ಮ ಹಾಗೂ ಭಾಷೆಗಳ ತಾರತಮ್ಯವಿಲ್ಲದೆ ಮತದಾನ ಮಾಡಿ. ದೇಶದಲ್ಲಿ ಪ್ರಧಾನಮಂತ್ರಿಯಿಂದ ಹಿಡಿದು ಜನಸಾಮಾನ್ಯರವರೆಗೂ ಎಲ್ಲರ ಮತಕ್ಕೂ ಒಂದೇ ಮೌಲ್ಯ. ಜವಾಬ್ದಾರಿಯುತ ಸರ್ಕಾರದ ಆಯ್ಕೆಯಲ್ಲಿ ನಿಮ್ಮ ಹಕ್ಕನ್ನ ಚಲಾಯಿಸಿ ಎಂದು ಕರೆ ನೀಡಿದರು.
ಚುನಾವಣಾ ಅಕ್ರಮಗಳನ್ನು ತಡೆಯಲು ಸಿ- ವಿಜಿಲ್ ಆಪ್ ಮೂಲಕ ದೂರು ದಾಖಲಿಸಿ. ಪ್ರಜ್ಞಾವಂತ ಮತದಾರರಾಗಿ ಚುನಾವಣಾ ಅಕ್ರಮಗಳನ್ನು ತಡೆಯುವಲ್ಲಿ ಭಾರತೀಯ ಚುನಾವಣಾ ಆಯೋಗದ ಕಣ್ಣು ಕಿವಿಗಳು ನೀವಾಗಬೇಕು. ಚುನಾವಣಾ ಆಯೋಗದ ವೆಬ್ಸೈಟ್ ಗೆ ಭೇಟಿ ನೀಡಿ ಬೇಕಾದ ಅಭ್ಯರ್ಥಿಗಳ ಮಾಹಿತಿ ಪಡೆಯಲು ಅವಕಾಶವಿದೆ. ಅಭ್ಯರ್ಥಿಯ ವೈಯಕ್ತಿಕ ಮಾಹಿತಿ, ಅವರ ಸಾಧನೆ ಹಾಗೂ ಚಾರಿತ್ರ್ಯಗಳ ಗೆ ಮಾಹಿತಿ ಪಡೆದು ಸೂಕ್ತ ವ್ಯಕ್ತಿಗೆ ಮತ ಚಲಾಯಿಸಬಹುದು ಎಂದರು.
ತಮ್ಮ ಬಾರಿಗೆ ಮತದಾನ ಮಾಡುತ್ತಿರುವ ನವ ಮತದಾರರಿಗೆ ಶುಭಾಶಯಗಳು ತಿಳಿಸಿದ ಅವರು, ಆಧಾರ್ ಕಾರ್ಡ್, ಪಾಸ್ಪೋರ್ಟ, ಪಾನ್ ಕಾರ್ಡ್, ವೋಟರ್ ಐಡಿ ಕಾರ್ಡ್ ಅಥವಾ ಇನ್ಯಾವುದೇ ದಾಖಲಾತಿಗಳನ್ನು ತೆಗೆದುಕೊಂಡು ಮತದಾನ ಮಾಡಬಹುದಾಗಿದೆ. ಈ ಬಾರಿ ಶೇ.90ರಷ್ಟು ಮತದಾನವಾಗಬೇಕು. ನಗರ ಪ್ರದೇಶಗಳಲ್ಲಿ ಶೇ. 75ರಷ್ಟು ಮತದಾನದ ನಿರೀಕ್ಷೆಯಲ್ಲಿದ್ದೇವೆ. ಎಲ್ಲಾ ಯುವ ಮತದಾರರು ನಿಮ್ಮ ಹಕ್ಕು ಹಾಗೂ ಮತವನ್ನು ನೈತಿಕವಾಗಿ ಚಲಾಯಿಸಿ ಎಂದು ತಿಳಿಸಿದರು.
ನಂತರ ಮತದಾನ ಕುರಿತಾದ ಜಾಗೃತಿ ಗೀತೆಗಳು, ಭರತನಾಟ್ಯ ಹಾಗೂ ಜಾಗೃತಿ ಬೀದಿ ನಾಟಕಗಳು ಜರುಗಿದವು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಪಾರಂಪರಿಕ ಇಲಾಖೆಯ ಆಯುಕ್ತರಾದ ದೇವರಾಜು, ನಗರ ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆದ ನಾಗರಾಜು, ಜಿಲ್ಲಾ ಪಂಚಾಯತ್ ನ ಉಪ ಕಾರ್ಯದರ್ಶಿಗಳಾದ ಕೃಷ್ಣಂರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.