ಮತದಾನ ಮಾಡುವುದು ನಾಗರಿಕರ ಕರ್ತವ್ಯ

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅಭಿಮತ | ಮತದಾನ ಜಾಗೃತಿ ಜಾಥಾ
ದೇವದುರ್ಗ,ಏ.೦೯- ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯಾವುದೇ ಆಮಿಷ, ಆಸೆಗೆ ಒಳಗಾಗದೆ ಸೂಕ್ತ ಅಭ್ಯರ್ಥಿಗೆ ಮತ ನೀಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ ಹೇಳಿದರು.
ಪಟ್ಟಣದ ವಾರ್ಡ್ ನಂ.೨೨ರ ತಪ್ಪರಗುಂಡಿ ಮಸೀದಿ ಏರಿಯಾದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಜಾಥಾದಲ್ಲಿ ಶನಿವಾರ ಮಾತನಾಡಿದರು. ೧೮ವರ್ಷ ತುಂಬಿದ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನ ಅಮೂಲ್ಯವಾದ ಮತದಾನ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ಹಬ್ಬ ಚುನಾವಣೆಯಲ್ಲಿ ಯಾರೊಬ್ಬರೂ ಮತದಾನದಿಂದ ವಂಚಿತರಾಗಬಾರದು ಎಂದರು.
ಆರೋಗ್ಯ ಇಲಾಖೆ ಎನ್‌ಆರ್‌ಎಲ್‌ಎಂ ಜಿ.ಮಾರ್ಕಂಡೆಯ್ಯ ಮಾತನಾಡಿ, ದೇಶದ ಪ್ರತಜಾಪ್ರಭುತ್ವ ಗಟ್ಟಿಗೊಳ್ಳಲು ಎಲ್ಲರೂ ಚುನಾವಣೆ ಪ್ರಕ್ರಿಯೆಯಲ್ಲಿ ತಪ್ಪದೆ ಭಾಗವಹಿಸಬೇಕಿದೆ. ಮತವನ್ನು ದಾನ ಮಾಡಬೇಕೆ ಹೊರತು ಹಣ, ಆಸೆ, ಆಮಿಷಕ್ಕೆ ಮಾರಿಕೊಳ್ಳಬಾರದು. ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ, ಶೇ.೧೦೦ರಷ್ಟು ಮತದಾನ ಆಗಬೇಕು ಎಂದರು.
ಪಾರಂಪರಿಕ ವೈದ್ಯ ಮಹಾಮುನಿ, ಅಲಿಪಾಷಾ ಮಸರಕಲ್, ಆಶಾ ಕಾರ್ಯಕರ್ತೆ ಸುಜಾತ, ದೀಪಿಕಾ, ಅಂಗನವಾಡಿ ಕಾರ್ಯಕರ್ತೆ ನಾಗಮಣಿ, ಶಿವಪ್ಪ ಇತರರಿದ್ದರು.