ಮತದಾನ ಮಾಡಿ ಮರಳಿ ಹೋಗುತ್ತಿದ್ದಾಗ ಆಟೋ ಪಲ್ಟಿ: ಮಹಿಳೆ ಸಾವು

ಚಿತ್ತಾಪುರ,ಡಿ.27-ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನ ಮಾಡಿ ಮರಳಿ ಹೋಗುತ್ತಿದ್ದಾಗ ಆಟೋ ಪಲ್ಟಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಚಿತ್ತಾಪುರ ತಾಲ್ಲೂಕಿನ ಯರಗಲ್ ಹತ್ತಿರ ಇಂದು ನಡೆದಿದೆ.
ಚಿತ್ತಾಪುರದ ಸರಸ್ವತಿ ಗಂಡ ರಾಘವೇಂದ್ರ ಕುಲಕರ್ಣಿ (30) ಮೃತಪಟ್ಟ ಮಹಿಳೆ.
ಚಿತ್ತಾಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯರಗಲ್ ಗ್ರಾಮಕ್ಕೆ ಮತದಾನ ಮಾಡಲೆಂದು ಚಿತ್ತಾಪುರದಿಂದ ಆಗಮಿಸಿದ್ದ ಸರಸ್ವತಿ ಅವರು ಮತದಾನ ಮಾಡಿ ಮರಳಿ ಆಟೋದಲ್ಲಿ ಹೋಗುತ್ತಿದ್ದಾಗ ಯರಗಲ್ ಸಮೀಪ ಆಟೋ ಪಲ್ಟಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಟೋದಲ್ಲಿದ್ದ ಇನ್ನೂ ಮೂರ್ನಾಲ್ಕು ಜನರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ಚಿತ್ತಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..