ಮತದಾನ ಮಾಡಿ ಪ್ರಜಾಪ್ರಭುತ್ವ ಬಲಪಡಿಸಿ: ಹಿರೇಮಠ

ವಿಜಯಪುರ,ಏ.19:ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ತಾಲೂಕ ಸ್ವೀಪ್ ಸಮಿತಿ ಹಾಗೂ ಗ್ರಾಮ ಪಂಚಾಯತ ಸಹಕಾರದೊಂದಿಗೆ ಮತದಾನದ ಮಹತ್ವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ ಹಿರೇಮಠ, ಮತದಾನ ಮಾಡುವುದು ಒಂದು ಪವಿತ್ರ ಕಾರ್ಯ. ಇದರಿಂದ ಸದೃಢ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಆ ದಿಸೆಯಲ್ಲಿ ಸಂವಿಧಾನಾತ್ಮಕ ಹಕ್ಕಾದ ಮತದಾನ ಕಾರ್ಯದಲ್ಲಿ ತಪ್ಪದೇ ಪಾಲ್ಗೊಳ್ಳುವಂತಾಗಬೇಕು. ನಮ್ಮ ಮತವನ್ನು ಮಾರಿಕೊಳ್ಳಬಾರದು ಸ್ವಂತ ವಿವೇಚನೆಯಿಂದ ಮತವನ್ನು ಚಲಾಯಿಸಿ, ಯುವ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ನಿರ್ಮಿಸಬೇಕು ಎಂದು ನುಡಿದರು.
ನಿಮ್ಮ ಮತ ನಿಮ್ಮ ಹಕ್ಕು, ಜಾಗತ ಮತದಾರ, ಸದೃಢ ಪ್ರಜಾಪ್ರಭುತ್ವ, ನಿಮ್ಮ ಮತ ಗೌಪ್ಯವಾಗಿರಲಿ, ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ನನ್ನ ಮತ ಮಾರಟಕ್ಕಿಲ್ಲ, ಮುಕ್ತ, ನ್ಯಾಯಸಮ್ಮತ ಹಾಗೂ ನಿರ್ಭೀತಿಯಿಂದ ಮತ ಚಲಾಯಿಸಿ, ಎಂಬ ಘೋಷ ವಾಕ್ಯದೊಂದಿಗೆ ಗ್ರಾಮದ ಪ್ರಮುಖ ಬಸ್ ನಿಲ್ದಾಣ, ಕೃಷಿ ಮಾರುಕಟ್ಟೆ, ಆವರಣ, ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಪ್ರಮುಖ ಸ್ಥಳ, ಹಾಗೂ ಮನೆಗೆÉ ತೆರಳಿ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕಿ ಭಾರತಿ ಹಿರೇಮಠ, ಪಿಡಿಒ ಜಯಶ್ರೀ ಪವಾರ, ಕಾರ್ಯದರ್ಶಿ ಅಮೃತಾ ನಿಂಬಾಳಕರ, ಐಇಸಿ ಸಂಯೋಜಕ ಶಾಂತು ಇಂಡಿ, ಸುಧಾ ಬಗಲಿ ಮಲ್ಲಮ್ಮ ಹೂಗಾರ, ರೇಖಾ ಮರಣೂರ ಸುನಂದಾ ಹನಗಂಡಿ ಹಾಗೂ ಗ್ರಾಮ ಪಂಚಾಯತ ಸಿಬ್ಬಂದಿ ಇದ್ದರು.