ಮತದಾನ ಮಾಡಿ ಉತ್ತಮ ಗ್ರಾಮಗಳ ನಿರ್ಮಾಣಕ್ಕೆ ಕೈಜೋಡಿಸಿ

ಹಾವೇರಿ:ಡಿ.20- ಗ್ರಾಮ ಪಂಚಾಯತ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿ ನಾಗರಿಕರು ಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸುವಂತೆ ಕದರಮಂಡಲಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶಾರದಾ ಕುದರಿ ಅವರು ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕದರಮಂಡಲಗಿ ಗ್ರಾಮ ದಲ್ಲಿ ಮತದಾರರ ಜಾಗೃತಿಗಾಗಿ ಬೀದಿನಾಟಕ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಮಗೆ ದೊರೆತಿರುವ ಮತದಾನದ ಹಕ್ಕು ಗ್ರಾಮದ ಅಭಿವೃದ್ಧಿಗೆ ಚಲಾಯಿಸಿ. ನೂರರಷ್ಟು ಮತದಾನವಾದರೆ ಪ್ರಜಾಪ್ರಭುತ್ವದ ಗೆಲುವು ಎಂದು ಅವರು ಹೇಳಿದರು.
ಮತಗಟ್ಟೆಗಳಲ್ಲಿ ವಿಕಲಚೇತನರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಕೋವಿಡ್ ಸುರಕ್ಷರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಭಯ ಆತಂಕವಿಲ್ಲದೆ ಮತದಾನದಲ್ಲಿ ಭಾಗವಹಿಸಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿಕೊಂಡರು.
ಕದರಮಂಡಲಗಿ, ಅಸುಂಡಿ, ಹಂಸಭಾವಿ ಹಾಗೂ ಅಬಲೂರ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ ವಾರ್ತಾ ಇಲಾಖೆಯ ಕನ್ನಡತಿ ಕಲಾ ತಂಡದ ಮುಖ್ಯಸ್ಥೆ ಲತಾ ಪಾಟೀಲ ಹಾಗೂ ದುರ್ಗಾದೇವಿ ಜಾನಪದ ಸಾಂಸ್ಕøತಿಕ ಕಲಾ ತಂಡದ ಮುಖ್ಯಸ್ಥೆ ರೇಣುಕಾ ಚಲವಾದಿ ನೇತೃತ್ವದ ಮಹಿಳಾ ತಂಡದ ಪ್ರದರ್ಶನದ ಮೂಲಕ ಕೋವಿಡ್ ಮುನ್ನೆಚ್ಚರಿಕೆ ಹಾಗೂ ಮತದಾರರ ಜಾಗೃತಿ ಮೂಡಿಸಿದರು.
ಗ್ರಾಮದಲ್ಲಿ ಕಾರ್ಯಕ್ರಮದ ನೇತೃತ್ವವನ್ನು ಹಂಸಭಾವಿಯ ಪಿಡಿಓ ಬಿ.ರವಿ ಹಾಗೂ ಅಬಲೂರು ಗ್ರಾಮ ಪಂಚಾಯತಿಯ ರುದ್ರಪ್ಪ ಬಸಪ್ಪ ಕಂಬಾರ, ಅಸುಂಡಿ ಗ್ರಾ.ಪಂ.ಕಾರ್ಯದರ್ಶಿ ಬಿ.ಎಚ್.ಪಾಟೀಲ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.