ಮತದಾನ ಮಾಡದವರಿಗೆ ಸೌಲಭ್ಯ ಕಡಿತಕ್ಕೆ ಮನವಿ

ಸಂಜೆವಾಣಿ ವಾರ್ತೆ

ದಾವಣಗೆರೆ.ಜ.22: ಇತ್ತೀಚಿನ ದಿನಗಳಲ್ಲಿ ಚುನಾವಣೆ ಬಂತೆಂದರೆ ಶೇಕಡವಾರು ಮತದಾನ ಕಡಿಮೆಯಾಗಿದೆ ಎಂಬುದು ಚರ್ಚಿತ ವಿಚಾರ. ಲೋಕಸಭೆ, ವಿಧಾನಸಭೆ, ಮಹಾನಗರ ಪಾಲಿಕೆ, ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸೇರಿದಂತೆ ಯಾವುದೇ ಚುನಾವಣೆಗಳು ನಡೆದರೂ ಮತದಾನ ಪ್ರಮಾಣ ಹೆಚ್ಚಾಗಬೇಕು. ಮತದಾನ ಮಾಡದವರಿಗೆ ಶಿಕ್ಷೆ ವಿಧಿಸುವಂಥ ಕಾನೂನು ಜಾರಿಯಾಗಬೇಕು ಎಂದು ವಾಣಿ ಲ್ಯಾಂಡ್ ಲಿಂಕ್ಸ್ ಮಾಲೀಕ ಹಾಗೂ ವರ್ತಕ ನಾಗಭೂಷಣ್ ವಾಣಿ ಆಗ್ರಹಿಸಿದ್ದಾರೆ.ಮತದಾನ ಮಾಡದವರಿಗೆ ಸೌಲಭ್ಯಗಳನ್ನು ಕಡಿತಗೊಳಿಸಬೇಕು. ಮತದಾನ ಕಡ್ಡಾಯಗೊಳಿಸುವುದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಹಾಗಾಗಿ, ಕೆಲವು ಸಲಹೆಗಳು ಇಲ್ಲಿವೆ. ಇವು ಜಾರಿಯಾದರೆ ಮತದಾನ ಪ್ರಮಾಣ ಹೆಚ್ಚಾಗುವುದು ಖಚಿತ. ಮತದಾನ ಕಡ್ಡಾಯಗೊಳಿಸಬೇಕು. ಆಧಾರ್ ಕಾರ್ಡ್ ನಂತೆಯೇ ಮತದಾನದ ಸ್ವೀಕೃತಿ, ಕೆವೈಸಿ ಕಡ್ಡಾಯ ಕಟ್ಟುನಿಟ್ಟಾಗಬೇಕು.  ಸಾಮಾನ್ಯ ಮನುಷ್ಯನನ್ನು ಆಯ್ಕೆ ಮಾಡಲು ಸಮಾಜಕ್ಕೆ ಒಂದು ಅವಕಾಶ ಹಾಗೂ ಬಂಡವಾಳಶಾಹಿಗಳನ್ನು ಬಗ್ಗುಬಡಿಯುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದ್ದಾರೆ.ಶೇಕಡವಾರು ಮತದಾನ ಹೆಚ್ಚಿಸಬಹುದು. ಅದರಿಂದ ಮತದಾನ ಓಲೈಕೆ ಪಿಡುಗು ತಪ್ಪಿಸಬಹುದು. ಮತದಾನ ಮಾಡಿದ ಸ್ವೀಕೃತಿ ಪತ್ರ ಎಲ್ಲಾ ಸೌಲಭ್ಯ ಪಡೆಯಲು ಮಾನದಂಡವಾಗಬೇಕು. ಅದು ನಾಗರಿಕನ ಬದ್ಧತೆಯಾಗಬೇಕು.  ಮತದಾನ ಮಾಡಲು ಅವಶ್ಯಕವಿರುವ ಮತದಾನ ಗುರುತಿನ ಚೀಟಿಯನ್ನು ಸರ್ಕಾರದ ಕನಿಷ್ಠ ವಯೋಮಿತಿಗೆ ತಲುಪಿದ ವ್ಯಕ್ತಿಯೂ ಕಡ್ಡಾಯವಾಗಿ ಚುನಾವಣಾಧಿಕಾರಿಗಳ ಕಚೇರಿಗೆ ವೈಯಕ್ತಿಕವಾಗಿಹೋಗಿ ಪಡೆಯತಕ್ಕದ್ದು. ಇಲ್ಲವಾದಲ್ಲಿ ವಾರ್ಷಿಕವಾಗಿ ದಂಡ ಪಾವತಿಸಿದರೆ ಮಾತ್ರ ಚೀಟಿ ಪಡೆಯಲು ಅರ್ಹ. ಮತದಾನದ ವೇಳೆಯನ್ನು ಹೆಚ್ಚಿಸಬೇಕು. ಬೂತುಗಳ ಸಂಖ್ಯೆಯನ್ನು ಸಹ ಹೆಚ್ಚಿಸುವುದು ಹಾಗೂ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಖ್ಯೆ ಹೆಚ್ಚಿಸಬೇಕು. ಮತದಾನ ಮಾಡಿದ ಸ್ವೀಕೃತಿ ಆ ಕ್ಷೇತ್ರದ ಇನ್ನೊಂದು ಯಾವುದೇ ಚುನಾವಣೆಯ ತನಕ ಮಾತ್ರ ಮಾನ್ಯತೆ ಇರಬೇಕು ಎಂದು ಸಲಹೆ ನೀಡಿದ್ದಾರೆ.ಚಾಲನಾ ಪರವಾನಗಿ ಪಡೆಯಲು ವಿದ್ಯಾರ್ಹತೆಯನ್ನು ನಿಗದಿಪಡಿಸಿರುವಂತೆ ಸೌಲಭ್ಯ ಪಡೆಯಲು ನಿಗದಿಪಡಿಸೇಕು.  ಸೌಲಭ್ಯಗಳನ್ನು ಪಡೆಯಲು ಮೀನಸಲಾತಿ ಮಾನದಂಡವನ್ನೇ ಅಳವಡಿಸಬೇಕು. ಸಾಮಾನ್ಯ ಎನ್ನುವ ಕೆಟಗರಿಯನ್ನು ಸಂಪೂರ್ಣ ರದ್ದುಪಡಿಸಬೇಕು. ಅವರವರ ಕೆಟಗರಿ ಗಳಡಿಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು.   ಯಾವುದಾದರೂ ಅನಿವಾರ್ಯ ಕಾರಣಕ್ಕೆ ಮತದಾನ ಮಾಡಲು ಆಗದಿದ್ದ ಪಕ್ಷದಲ್ಲಿ ಕೋರ್ಟ್ ನ ಮೂಲಕ ಅರ್ಹತೆ ಪಡೆಯಬೇಕು ಮತ್ತು ಅದು ಜೀವಿತಾವಧಿಯಲ್ಲಿ ಮೂರು ಬಾರಿ ಮಾತ್ರ ಅವಕಾಶ ಕೊಡಬೇಕು.  ವಿದ್ಯಾವಂತರ ಮತದಾನದ ದಿನ ಹೊರಗೆ ಹೋಗ್ತಾರೆ. ಅವರೂ ಮತದಾನದಿಂದ ವಂಚಿತರಾಗಬಾರದು. ಹೀಗೆ ನಿರ್ಲಕ್ಷ್ಯ ವಹಿಸಿದ್ದು ಸಾಬೀತಾದರೆ ದಂಡದ ಜೊತೆಗೆ ತನ್ನ ಹಕ್ಕು ಚಲಾಯಿಸದ ಕಾರಣ, ನಿರ್ಲಕ್ಷ್ಯ ವಹಿಸಿದ್ದಕ್ಕೆ ಸೌಲಭ್ಯ ಕಡಿತಗೊಳಿಸಬೇಕು. ವಿದ್ಯಾವಂತರು ಮತದಾನದಿಂದ ದೂರ ಉಳಿಯದಂತೆ ಎಚ್ಚರ ವಹಿಸಬೇಕು. ಮತದಾನ ಮಾಡಿದ ಬಳಿಕ ಹೋಗಲಿ. ಮತದಾನದ ದಿನದಂದು ಉದ್ದೇಶಪೂರ್ವಕವಾಗಿ ಹೋದರೆ ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ವಿನಾಯಿತಿ ನೀಡಬಾರದು ಎಂದಿದ್ದಾರೆ.ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಲಾಗಿದೆ. ವೋಟರ್ ಐಡಿ ಪಡೆಯಲು ಮೀನಾಮೇಷ ಎಣಿಸುತ್ತಾರೆ. ಸೂಕ್ತ ಜನಪ್ರತಿನಿಧಿ ಆಯ್ಕೆ ಮಾಡಲು ಮತದಾನದ ಶಕ್ತಿ ಬಳಕೆಯಾಗಬೇಕು. ಈ ಎಲ್ಲಾ ಅಂಶಗಳು ಜಾರಿಯಾದರೆ ಮತದಾನ ಹೆಚ್ಚಳವಾಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ, ಗಂಭೀರವಾಗಿ ಪರಿಗಣಿಸಿ ಈ ವಿಚಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕು ಎಂಬ ದೃಷ್ಟಿಯಿಂದ ಈ ಸಲಹೆಗಳನ್ನು ನೀಡಲಾಗಿದೆ. ತಾವುಗಳು ಗಂಭೀರವಾಗಿ ಪರಿಗಣಿಸಿ ಶೇಕಡವಾರು ಮತದಾನ ಹೆಚ್ಚಳಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.