
ಬಳ್ಳಾರಿ,ಏ.25:
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಅಂಗವಾಗಿ ನಡೆಯುವ ಮತದಾನ ಮತ್ತು ಮತ ಎಣಿಕೆ ದಿನಗಳಂದು ಶಾಂತಿ ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಎಲ್ಲ ತರಹದ ಮದ್ಯ ತಯಾರಿಕೆ ಘಟಕಗಳು, ಮದ್ಯ ಮಾರಾಟ, ಸಂಗ್ರಹಣೆ, ಸಾಗಾಣಿಕೆಯನ್ನು ನಿಷೇಧಿಸಿ ‘ಒಣ ದಿನ’ ಎಂದು ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಮತದಾನವು ಮುಕ್ತಾಯವಾಗುವ 48 ಗಂಟೆಗಳ ಅವಧಿಯೊಳಗಿನ ದಿನಗಳಲ್ಲಿ ಅಂದರೆ ಮೇ 8 ರ ಸಂಜೆ 6 ರಿಂದ ಮೇ 10 ರ ಮಧ್ಯರಾತ್ರಿ 12 ಗಂಟೆಯ ವರೆಗೆ ನಿಷೇಧಿಸಲಾಗಿದೆ. ಅದರಂತೆ, ಮತ ಎಣಿಕೆ ನಿಮಿತ್ಯ ಮೇ 12 ರ ಮಧ್ಯರಾತ್ರಿ 12 ರಿಂದ ಮೇ 13 ರ ಮಧ್ಯರಾತ್ರಿ 12 ರವರೆಗೆ ಜಿಲ್ಲೆಯಾದ್ಯಂತ ಎಲ್ಲ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಹಾಗೂ ಎಲ್ಲಾ ರೀತಿಯ ಮದ್ಯ ತಯಾರಿಕಾ ಘಟಕಗಳು, ಸಾಗಾಣಿಕೆ ಮತ್ತು ಸಂಗ್ರಹಣೆ ಹಾಗೂ ಮದ್ಯ ಸಾಗಾಟವನ್ನು ನಿಷೇಧಿಸಿ ‘ಒಣ ದಿನ’ ಎಂದು ಘೋಷಿಸಲಾಗಿದೆ.
ಈ ಆದೇಶದಲ್ಲಿನ ಸೂಚನೆಗಳನ್ನು ಉಲ್ಲಂಘಿಸಿದಲ್ಲಿ ಅಂಥವರು ಪ್ರಜಾ ಪ್ರತಿನಿಧಿ ಕಾಯ್ದೆ 1951 ಕಲಂ 135 ಸಿ (2) ಮತ್ತು (3) ರನ್ವಯ ಶಿಕ್ಷೆಗೆ ಒಳಪಡುವರು. ಅಬಕಾರಿ ಉಪ ಆಯುಕ್ತರು, ಈ ದಿನಗಳಂದು ಮದ್ಯ ಮಾರಾಟ ಆಗದಂತೆ ಕಟ್ಟುನಿಟ್ಟಾಗಿ ನಿಗಾ ವಹಿಸತಕ್ಕದ್ದು, ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.