
ರಾಮನಗರ,ಏ.೧೨- ಮೂಲಭೂತ ಸೌಕರ್ಯಗಳನ್ನು ನೀಡುವವರೆಗೂ ಮತ ಹಾಕುವುದಿಲ್ಲ ಎಂದು ಸಮೀಪದ ಮಾಯಗನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಗೋಪಾಲಪುರ, ರಾಂಪುರದೊಡ್ಡಿ, ಇರುಳಿಗರ ಕಾಲೋನಿ, ದಾಸೇಗೌಡನದೊಡ್ಡಿ ಗ್ರಾಮಸ್ಥರು ಮಂಗಳವಾರ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿ ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ಥಿ ಕಾಮಗಾರಿ ಸರಿಪಡಿಸದಿದ್ದರೆ ಗ್ರಾಮಸ್ಥರು ಮತ ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮಳೆಗಾಲದಲ್ಲಿ ಸುರಿಯುವ ಮಳೆಗೆ ರಾಂಪುರದೊಡ್ಡಿ, ಗೋಪಾಲಪುರ ಇಳುಗರದೊಡ್ಡಿ ಗ್ರಾಮಗಳಿಗೆ ತೆರಳುವ ಸಾರ್ವಜನಿಕ ಹರಸಾಹಸ ಮಾಡುವಂತಾಗಿದೆ ಶಾಸಕರಾದಿಯಾಗಿ ಯಾವ ಜನಪ್ರತಿನಿಧಿಗಳು ಕಾಮಗಾರಿ ನಡೆಸಲು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ರಸ್ತೆಯಲ್ಲಿ ವಾಹನ ಅಷ್ಟೇ ಅಲ್ಲ ನಡೆದಾಡದಂತಹ ಸ್ಥಿತಿಯಿದೆ. ಸಂಬಂಧ ಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಕಾರಣ ೧೫೦ ಮಂದಿ ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.
ಗ್ರಾಮಸ್ಥ ಲಕ್ಷ್ಮಣ್ ಮಾತನಾಡಿ, ಸರಕಾರಿ ಅಧಿಕಾರಿಗಳ ನಿರ್ಲಕ್ಷದಿಂದ ನಮ್ಮ ಗ್ರಾಮಕ್ಕೆ ಇದುವರೆಗೂ ನಮ್ಮ ರಸ್ತೆ ಕಾಮಗಾರಿ ನಡೆದಿಲ್ಲ. ಮಳೆಗಾಲದಲ್ಲಿ ರಸ್ತೆ ತುಂಬೆಲ್ಲಾ ನೀರು ತುಂಬಿ ಆ ಸಮಯದಲ್ಲಿ ವಾಹನ ಹತೋಟಿ ತಪ್ಪಿದರೆ ಬಿದ್ದು ಚಾಲಕರು ಪ್ರಾಣ ಕಳೆದುಕೊಳ್ಳುವ ಆತಂಕವಿದೆ. ಈ ಹದಗೆಟ್ಟ ರಸ್ತೆಯನ್ನು ದುರಸ್ತಿಗೊಳಿಸಬೇಕು’ ಎಂದು ಹೇಳಿದರು.