ಮತದಾನ ಬಹಿಷ್ಕರಿಸದಂತೆ ಮನವೊಲಿಸಿದ ಅಧಿಕಾರಿಗಳು


ಸಂಜೆವಾಣಿ ವಾರ್ತೆ
ಕೊಟ್ಟೂರು, ಏ.28: ತಾಲೂಕಿನ ಕೋಗಳಿ ಗ್ರಾ.ಪಂ. ವ್ಯಾಪ್ತಿಯ ಕೆ.ಕೋಡಿಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮತದಾನ ಕೇಂದ್ರ ತೆರೆಯುವಂತೆ ಆಗ್ರಹಿಸಿ ಮತದಾನ ಬಹಿಷ್ಕರಿಸುವುದಾಗಿ ಪಟ್ಟು ಹಿಡಿದಿದ್ದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಸದಾಶಿವ ಪ್ರಭು ಸರ್ ಅವರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿದರು. ಕೆ.ಕೋಡಿಹಳ್ಳಿ ಗ್ರಾಮ ಕೋಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆದರೆ, ಮಾಲವಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕೋಗಳಿ ತಾಂಡಾಕ್ಕೆ ತೆರಳಿ ಅಲ್ಲಿನ ಮತದಾನ ಕೇಂದ್ರದಲ್ಲಿ ಈಗಲೂ ಮತದಾನ ಮಾಡಬೇಕಿದೆ. ಬೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮತಗಟ್ಟೆಗೆ ತೆರಳಿ ನಾವು ಮತದಾನ ಮಾಡುವುದಿಲ್ಲ. ನಮ್ಮ ಗ್ರಾಮದಲ್ಲಿಯೇ ಮತದಾನ ಕೇಂದ್ರ ಆರಂಭಿಸಿ ಇಲ್ಲಿಯೇ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ನಾವು ಮತದಾನ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಈ ವೇಳೆ ಮಾನ್ಯ ಸಿಇಒ ಸದಾಶಿವಪ್ರಭು ರವರು ಗ್ರಾಮಸ್ಥರೊಂದಿಗೆ ಮಾತನಾಡಿ, ಗ್ರಾಮದಲ್ಲಿ 413 ಮತದಾರರಿದ್ದು, ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು. ಮುಂದಿನ ಚುನಾವಣೆಯ ವೇಳೆಗೆ ಗ್ರಾಮದಲ್ಲಿ ಮತಗಟ್ಟೆ ತೆರೆಯುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿ, ಗ್ರಾಮಸ್ಥರ ಮನವೊಲಿಸಿದರು.