ಮತದಾನ ಪ್ರೇರೇಪಿಸುವ ವಿಶಿಷ್ಟ ಸಂಯೋಜನೆ ಹಾಡು

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೪; ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಮತದಾನವನ್ನು ಪ್ರೇರೇಪಿಸುವ ವಿಶಿಷ್ಟ ಸಂಯೋಜನೆಯ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದೆ.ಹಿಂದಿ, ಬೆಂಗಾಲಿ, ಮರಾಠಿ, ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಕನ್ನಡ, ಮಲೆಯಾಳಂ, ಅಸ್ಸಾಮಿ, ಒಡಿಯಾ, ಕಾಶ್ಮೀರಿ, ಸಂತಾಲಿ ಭಾಷೆಗಳೆಲ್ಲವನ್ನೂ ಒಂದೇ ಹಾಡಿನಲ್ಲಿ ಬಳಸಲಾಗಿದೆ. ಇದರೊಂದಿಗೆ ದೇಶದ ವೈವಿದ್ಯತೆ ಎತ್ತಿತೋರಿಸುವ ವಿಡಿಯೋ ಚಿತ್ರಿಕರಣ ನೋಡುಗರ ಕಣ್ಮನ ಸೆಳೆಯುತ್ತಿದೆ. ಮುಂಬಯಿ ವಿಸ್ಟಲಿಂಗ್ ವುಡ್ಸ್ ಇಂಟರ್‍ನ್ಯಾಷಿನಲ್ ಸ್ಕೂಲ್ ಆಫ್ ಮ್ಯೂಜಿಕ್ ಸಹಯೋಗದಲ್ಲಿ ಖ್ಯಾತ ಚಲನಚಿತ್ರ ನಿರ್ಮಾತೃ, ನಿರ್ದೇಶಕ ಸುಭಾಷ್ ಗಾಯಾ ಗೀತೆ ಬರೆದು ರಾಗ ಸಂಯೋಜನೆ ಮಾಡಿದ್ದಾರೆ. ಖ್ಯಾತ ಗಾಯಕರಾದ ಕವಿತಾ ಕೃಷ್ಣಮೂರ್ತಿ, ಸುಧಿತಿ ಚೌವ್ಹಾಣ್, ಕೆ.ಎಸ್.ಚಿತ್ರ, ಮನು, ಸುಖವಿಂದರ್ ಸಿಂಗ್, ಜಾವಿದ್ ಅಲಿ, ಸೋನು ನಿಗಮ್, ವಿಜಯ್ ಪ್ರಕಾಶ್, ವಿಜಯ್ ಯೇಸುದಾಸ್ ಸೇರಿದಂತೆ 18 ಖ್ಯಾತ ಗಾಯಕರು ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.ಇದೇ ಮಾದರಿಯಲ್ಲಿ ಕರ್ನಾಟಕ ಚುನಾವಣಾ ಆಯೋಗವು ಸಹ ಮತದಾನವನ್ನು ಪ್ರೇರೇಪಿಸುವ ಸಲುವಾಗಿ ರಾಜ್ಯದ ಐತಿಹಾಸಿಕ, ಪಾರಂಪರಿಕ, ಭೌಗೋಳಿಕ ಹಾಗೂ ಸಾಂಸ್ಕøತಿಕ ವೈವಿದ್ಯತೆಯನ್ನು ಬಿಂಬಿಸುವ “ನಾ ಭಾರತ, ಭಾರತ ನನ್ನಲ್ಲಿ, ನಾ ಜಾಗೃತ, ಜಾಗೃತಿ ನನ್ನಲ್ಲಿ” ಗೀತೆ ಬಿಡುಗಡೆ ಮಾಡಿದೆ. ಭವ್ಯ ಭಾರತಕ್ಕಾಗಿ ಮತದಾನ ಮಾಡುವ ಮಹತ್ವನ್ನು ಗೀತೆಯಲ್ಲಿ ಸಾರಲಾಗಿದೆ.ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್, ಶ್ರೀಧರ್ ಕೋಟೆ, ಸಂಗೀತಾ ಕಟ್ಟಿ, ನವೀನ್ ಸಜ್ಜು, ಅನನ್ಯ ಭಟ್, ಎಂ.ಆರ್.ಶ್ರೀಹರ್ಷ್,ಕಂಬದ ರಂಗಯ್ಯ, ಗುರುಕಿರಣ್, ನಂದಿತಾ, ನಿಖಲ್ ಪಾರ್ಥ ಸಾರಥಿ, ಚೇತನ್ ನಾಯಕ್, ಎಂ.ಡಿ.ಪಲ್ಲವಿ, ಮಂಜುಳ ಗುರುರಾಜ್, ವಿ.ಮನೋಹರ್ ಗೀತೆಯನ್ನು ಹಾಡಿದ್ದಾರೆ.ಇದರೊಂದಿಗೆ ನಟ ನಟಿಯರಾದ ಸುಧಾರಾಣಿ, ಶರಣ್, ಪ್ರೇಮ, ರಂಗಾಯಣ ರಘು, ಅಜಯ್ ರಾವ್, ನವೀನ್ ಶಂಕರ್, ಹರ್ಷಿಕಾ ಪೂಣಚ್ಚ, ಕ್ರಿಕೆಟ್ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸಹ ಗೀತೆಯ ಮೂಲಕ ಮತದಾನದ ಮಹತ್ವ ಸಾರಿದ್ದಾರೆ. ಇವರೊಂದಿಗೆ ನಾಡಿನ ಮೇರು ವ್ಯಕ್ತಿಗಳು, ಪದ್ಮಶ್ರೀ ಪುರಸ್ಕøತರು ಸಹ ಮತದಾನ ಸಂದೇಶಕ್ಕೆ ಕೈ ಜೋಡಿಸಿದ್ದಾರೆ.ನಾಡಿನ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳಲ್ಲಿ ಹಾಡಿನ ಚಿತ್ರಿಕರಣ ಮಾಡಲಾಗಿದೆ. ಚಿತ್ರದುರ್ಗದ ಐತಿಹಾಸಿಕ ಕೋಟೆಯಲ್ಲಿ ಸಹ ಚಿತ್ರಿಕರಣ ಮಾಡಿದ್ದು, ನಗರದ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಕಂಪಳ ರಂಗ ಸ್ಕೂಲ್ ವಿದ್ಯಾರ್ಥಿಗಳು ಹಾಡಿನಲ್ಲಿ ನೃತ್ಯ ಮಾಡಿದ್ದಾರೆ.ಹಿಂದಿ ಹಾಗೂ ಕನ್ನಡ ಗೀತೆಗಳನ್ನು ಈ ಕೆಳಗಿನ ಲಿಂಕ್‍ಗಳನ್ನು ಬಳಸಿ ಯೂಟ್ಯೂಬ್‍ನಲ್ಲಿ ನೋಡಬಹುದಾಗಿದೆ. https://www.youtube.com/watch?v=to324JIljf8https://youtu.be/Q5j5dHrYuyI?si=NLSv9w52sDOUpmK3